ಗೌರಿಶಂಕರ್​ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ, ಸುರೇಶ್​ಗೌಡ ವಿರುದ್ಧ ಹೆಬ್ಬೂರು ಠಾಣೆಯಲ್ಲಿ ಎಫ್​ಐಆರ್​!

sureshgowda gowrishankar
Published on

ತುಮಕೂರು: ಮಾಜಿ ಶಾಸಕ ಬಿ.ಸುರೇಶ್​ಗೌಡ ಕೊಲೆಗೆ ಸುಪಾರಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್​ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಗುರುವಾರ ಎಫ್​ಐಆರ್​ ದಾಖಲಾಗಿದೆ. ಅತ್ತ ಸುರೇಶ್​ಗೌಡ ವಿರುದ್ಧವೂ ಹೆಬ್ಬೂರು ಠಾಣೆಯಲ್ಲಿ ಶುಕ್ರವಾರ ಎಫ್​ಐಆರ್​ ದಾಖಲಾಗಿದೆ!

ಗೌರಿಶಂಕರ್​ ದೂರು: ಶಾಸಕ ಡಿ.ಸಿ.ಗೌರಿಶಂಕರ್​ ಉದ್ಯಮಿ ಬೊಮ್ಮನಹಳ್ಳಿ ಬಾಬು ಹಾಗೂ ವಕೀಲ ಹಿರೇಹಳ್ಳಿ ಮಹೇಶ್​ ಅವರು ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ಗೆ ಮಾಜಿ ಶಾಸಕ ಬಿ.ಸುರೇಶ್​ಗೌಡ ದೂರು ನೀಡಿದ್ದರು. ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ತುಮಕೂರು ತಾಲೂಕು ಅರೆಯೂರಿನಲ್ಲಿ ಇತ್ತೀಚಿಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಸುರೇಶ್​ಗೌಡ ಮಾಡಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ನಂತರ ಪರಸ್ಪರ ಆರೋಪ, ಪ್ರತ್ಯಾರೋಪದ ಜತೆಗೆ ದೂರು ಕೂಡ ದಾಖಲಿಸಿದ್ದರು.

ಸುರೇಶ್​ಗೌಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಗುರುವಾರಷ್ಟೇ ಶಾಸಕ ಡಿ.ಸಿ.ಗೌರಿಶಂಕರ್​ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕ್ಷೇತ್ರದ ಇಬ್ಬರೂ ನಾಯಕರ ಸ್ವಪ್ರತಿಷ್ಠೆಗೆ ಪೊಲೀಸರು ಹೈರಾಣಾಗಿದ್ದಾರೆ.

ಶಾಸಕ ಗೌರಿಶಂಕರ್​ ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಗೆ 5ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂದು ಸುರೇಶಗೌಡ ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಸುರೇಶ್​ಗೌಡ ಮಾತನಾಡಿದ್ದಾರೆ ಎಂಬ ಆಡಿಯೋವನ್ನು ಶಾಸಕ ಡಿ.ಸಿ.ಗೌರಿಶಂಕರ್​ ಬಿಡುಗಡೆ ಮಾಡಲಾಗಿದ್ದು, ಈ ಆಡಿಯೋದಲ್ಲಿ ಲಾರಿ ಹತ್ತಿಸಿ ಕೊಲೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ದೂರಿದ್ದರು. ಈ ಆಡಿಯೋ ನಕಲಿ ಎಂದು ಸುರೇಶ್​ಗೌಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪ್ರಸ್ತುತ ತುಮಕೂರು ತಾಲೂಕು ಹೆಬ್ಬೂರು ಠಾಣೆಯಲ್ಲಿ ಸುರೇಶ್​ಗೌಡ ವಿರುದ್ಧ ಕಲಂ120(ಬಿ),ಐಪಿಸಿ 506ರ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net