

ಮೈಸೂರು: ನಗರದ ಹೊರವಲಯದ ಉದ್ಬೂರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಿಸಲು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಎಂ.ಕೆ. ಸೋಮಶೇಖರ್ ಸೇರಿದಂತೆ 6 ಜನರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.
ದಟ್ಟಗಳ್ಳಿ 3ನೇ ಹಂತದ ಸೋಮನಾಥ ನಗರದ ನಿವಾಸಿ ಎಂ.ಡಿ. ಅಭೀಶ್ ಸಾಗರ್ ನೀಡಿದ ದೂರಿನ ಮೇರೆಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಅವರ ಪತ್ನಿ ಎಲ್. ಕುಸುಮಾ, ಸರ್ವೇಯರ್‌ಗಳಾದ ಮಾದೇಗೌಡ, ರಮೇಶ್, ಮುಡಾ ಅಧಿಕಾರಿಗಳು ಹಾಗೂ ನಿವೃತ್ತ ಪಿಡಿಒ, ಉದ್ಬೂರು ನಿವಾಸಿ ಮಹಂತಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಸಾರಾಂಶ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಅವರ ಪತ್ನಿ ಕುಸುಮಾ ಮತ್ತು ಅಧಿಕಾರಿಗಳು ಸೇರಿಕೊಂಡು ಉದ್ಬೂರು ಗ್ರಾಮದ ಸರ್ವೆ ನಂ.315 ರಲ್ಲಿನ 4 ಎಕರೆ 32 ಗುಂಟೆ, ಸರ್ವೆ ನಂ. 317 ರಲ್ಲಿನ 4 ಎಕರೆ 29 ಗುಂಟೆ ಸೇರಿ ಒಟ್ಟು 9 ಎಕರೆ 21 ಗುಂಟೆ ಭೂಮಿಯಲ್ಲಿ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಿಸಲು ಯತ್ನಿಸಿದ್ದಾರೆ. ಜನರಿಗೆ ವಂಚಿಸಲು ಹಾಗೂ ಅಕ್ರಮವಾಗಿ ಹಣ ಗಳಿಸು ಉದ್ದೇಶದಿಂದ ಬಡಾವಣೆಯ ನಕಲಿ ಯೋಜನೆ ಹಾಗೂ ನಕ್ಷೆ ತಯಾರಿಸಿದ್ದಾರೆ. ಸರ್ಕಾರದ ದಾಸ್ತವೇಜುಗಳನ್ನು ಖೊಟ್ಟಿಯಾಗಿ ಸೃಷ್ಟಿಸಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರಿಗೆ ಕೋಟ್ಯಾಂತರ ರೂ. ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.