

ಕಾರವಾರ: ಹೊನ್ನಾವರ ಕಾಸಕೋಡಿನಲ್ಲಿ ಮತ್ತೆ ಖಾಸಗಿ ಬಂದರಿನ ವಿಚಾರ ಭುಗಿಲೆದ್ದಿದೆ. ಗಲಾಟೆಗಳು ಪ್ರಾರಂಭವಾಗಿವೆ.
ಕಾಸರಕೋಡು ಟೊಂಕ ಪ್ರದೇಶದಲ್ಲಿ ರಾತ್ರಿ ವೇಳೆ ಕೆಲವರು ಮೀನುಗಾರರ ಮನೆಗೆ ನುಗ್ಗಿ, ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ತುಳು ಮಾತನಾಡುವ ಸುಮಾರು 40 ಜನರು ಇಸ್ಮಾಯಿಲ್ ಜಬಿವುಲ್ಲಾ ಅಶ್ರಫ್, ಖಾಸಿಂ ಹುಸೇನ್ ಸಾಬ್ , ಚಂದ್ರಕಾಂತ ತಾಂಡೇಲ ಅವರು ಎಚ್ ಪಿಪಿಎಲ್ ಕಂಪನಿಗೆ ಸೇರಿದವರು ಎಂದು ಹೇಳಿಕೊಳ್ಳುತ್ತ ಆಗಮಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೇಖಾ ತಾಂಡೇಲ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆಯಲ್ಲಿ ಗಂಡಸರು ಮೀನುಗಾರಿಕೆ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಗೆ ಬಂದು ಅಳತೆ ಮಾಡಲು ಶುರು ಮಾಡಿದ್ದರು ಎನ್ನಲಾಗಿದೆ. ಅದನ್ನು ಪ್ರಶ್ನಿಸಿದ ರಾಜೇಶ ತಾಂಡೇಲ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಲಾಸರಕೋಡಿನಲ್ಲಿ ಬಂದರು ನಿರ್ಮಾಣ ಮಾಡಲು ಹೊರಟಿದೆ. ಪೋರ್ಟ್ ಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡುವ ಸಂಬಂಧದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೂ, ಕಂಪನಿ ಕಾಮಗಾರಿ ಮಾಡುವ ಅನುಮಾನ ಮೂಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಹಿಂದೆ ಬಂದರು ನಿರ್ಮಾಣ ವಿರೋಧಿಸಿ ಕಾಸರಕೋಡು ಭಾಗದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಆಗ ಮಾಜಿ ಶಾಸಕ ಮಂಕಾಳ ವೈದ್ಯ ಮೀನುಗಾರರ ಪರ ನಿಂತಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಆಗಮಿಸಿ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಈಗ ಮಂಕಾಳ ವೈದ್ಯ ಮೀನುಗಾರಿಕೆ ಸಚಿವರಾಗಿದ್ದಾರೆ. ಡಿಕೆಶಿ ಡಿಸಿಎಂ ಆಗಿದ್ದಾರೆ. ಆದರೆ, ಸಚಿವರ ತವರಲ್ಲೇ ದೌರ್ಜನ್ಯ ನಡೆದಿದೆ.
ಹೊನ್ನಾವರ ಟೊಂಕದಲ್ಲಿ ಖಾಸಗಿ ಬಂದರು ನಿರ್ಮಾಣ ವಿಚಾರ ನ್ಯಾಯಾಲಯದಲ್ಲಿದೆ. ಇದರಿಂದ ಮಾತನಾಡುವುದು ಸರಿಯಾಗದು. ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸಲಾಗುವುದು.ಮಂಕಾಳ ವೈದ್ಯಮೀನುಗಾರಿಕೆ ಸಚಿವ