ಕಳಪೆ ಭತ್ತದ ಬೀಜ ಪೂರೈಕೆದಾರರಿಗೆ ದಂಡ

Consumar court
ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ
Published on

ಶಿವಮೊಗ್ಗ: ಶಿಕಾರಿಪುರ ತಾಲೂಕು ಮಾಲಗೊಂಡನಕೊಪ್ಪ ಮತ್ತು ಬಿಳಿಕಿ ಗ್ರಾಮದ ರೈತರಿಗೆ ಕಳಪೆ ಭತ್ತದ ಬೀಜ ನೀಡಿದ ಪೂರೈಕೆದಾರರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.

ತೆಲಂಗಾಣ ಮೆಹಬೂಬ್ ನಗರದ ಕಾಸ್ವಿ ಅಗ್ರಿ ಜೆನೆಟಿಕ್ಸ್ ಪ್ರೈ.ಲಿ., ದಾವಣಗೆರೆ ಎಪಿಎಂಪಿಯಲ್ಲಿರುವ ಶ್ರೀ ಗಂಗಾ ಆಗ್ರೋ ಇನ್‌ಪುಟ್ಸ್, ಮತ್ತು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಶ್ರೀ ಓಂ ಟ್ರೇಡರ್ಸ್‌ನವರು ರಮೇಶಪ್ಪ, ರಾಮಪ್ಪ, ಸೋಮಪ್ಪ ಮತ್ತು ಇತರ 12 ಕೃಷಿಕರಿಗೆ ಕಳಪೆ ಭತ್ತದ ಬೀಜಗಳನ್ನು ಪೂರೈಸಿದ್ದರು. ಈ ಸಂಬಂಧ ಕೃಷಿಕರು ಆಯೋಗಕ್ಕೆ ದೂರು ನೀಡಿದ್ದರು.

ಶ್ರೀ ಓಂ ಟ್ರೇಡರ್ಸ್‌ನವರಿಂದ ಚಾರ್ಮಿ ತಳಿಯ ಭತ್ತದ ಬೀಜಗಳನ್ನು ರೈತರು ಖರೀದಿಸಿದ್ದರು. ಬಿತ್ತನೆ ಮಾಡಿ 40ರಿಂದ 50 ದಿನಗಳಾದರೂ ಪೈರು ಬೆಳವಣಿಗೆಯಾಗಿರಲಿಲ್ಲ. ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದವರು ಪರಿಶೀಲಿಸಿ ನೀಡಿರುವ ವರದಿ ಆಧರಿಸಿ ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಮಟ್ಟದ್ದಾಗಿದ್ದು, ಇಳುವರಿ ಕಡಿಮೆಯಾಗಿರುವುದಾಗಿ ದೂರು ನೀಡಿದ್ದರು.

ದೂರುದಾರರ ಮತ್ತು ಎದುರುದಾರರ ಪ್ರಮಾಣಪತ್ರ, ದಾಖಲೆ ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ, ಎಲ್ಲ 13 ದೂರುದಾರರಿಗೆ 4,43,724 ರೂ.ಗಳನ್ನು ಶೇ.8ರ ಬಡ್ಡಿ ಸಹಿತ 2023ರ ಜ.1ರಿಂದ ಅನ್ವಯವಾಗುವಂತೆ ಈ ಆದೇಶವಾದ 45 ದಿನಗಳೊಳಗೆ ಪರಿಹಾರವಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.10ರಂತೆ ಬಡ್ಡಿಯನ್ನು ಪೂರ್ತಿ ಹಣ ಪಾವತಿಸುವವರೆಗೆ ಹಾಗೂ ಮಾನಸಿಕ ಹಾನಿಗೆ 10 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು 5 ಸಾವಿರ ರೂ. ಗಳನ್ನು ಪ್ರತಿ ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net