

ಹುಬ್ಬಳ್ಳಿ : ಬ್ಲಾಕ್ ಸ್ಪಾಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ಮಹಾನಗರ ಪಾಲಿಕೆ, ಜುಲೈ ಅಂತ್ಯದಿಂದಲೇ ಅಂತವರಿಗೆ ದಂಡ ವಿಧಿಸಲು ಮುಂದಾಗಿದೆ.
ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಮಹಾಪೌರ ಜ್ಯೋತಿ ಪಾಟೀಲ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುತ್ತಿದ್ದ ಸ್ಥಳಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ, ರಂಗೋಲಿ ಹಾಕಲಾಗಿತ್ತು. ಅಂತಹ ಸ್ಥಳಗಳಲ್ಲಿ ಕಸ ಎಸೆಯದಂತೆ ಸುತ್ತಲಿನ ಜನರಿಗೆ ಸೂಚಿಸಲಾಗಿತ್ತು ಎಂದರು.
ಆದರೂ, ಬಹುತೇಕ ಬ್ಲಾಕ್ ಸ್ಪಾಟ್ಗಳಲ್ಲಿ ಮತ್ತೆ ಕಸ ಸಂಗ್ರಹಗೊಳ್ಳುತ್ತಿದೆ. ಈ ಸ್ಥಳಗಳಲ್ಲಿ ಈಗಾಗಲೇ 116 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕೆಲವರಿಗೆ ಈ ಹಿಂದೆ ದಂಡವನ್ನೂ ಹಾಕಲಾಗಿದೆ. ಇದೀಗ ಮತ್ತೊಂದಿಷ್ಟು ಸಿಸಿಟಿವಿ ಕ್ಯಾಮರಾಗಳನ್ನು ಅಳಡಿಸಲಾಗುವುದು. ಆ ಮೂಲಕ ಮಹಾನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಮುದಾಯ ನಿರ್ವಾಹಕ ( ಕಮ್ಯುನಿಟಿ ಮೊಬಲೈಸರ್ಸ್) ರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದಡಿ ಇವರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಇವರ ಸಂಬಳ ಹಾಗೂ ಇನ್ನಿತರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಪ್ರತಿಯೊಬ್ಬರಿಗೆ 18,700 ರೂ. ಸಂಬಳ ನೀಡಲಾಗುತ್ತದೆ. ಮೂರು ವರ್ಷಗಳವರೆಗೆ ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಹೆಲ್ತ್ ಇನಸ್ಪೆಕ್ಟರ್ಗಳ ಜತೆಗೂಡಿ ಸಮುದಾಯ ನಿರ್ವಾಹಕರು ಕಾರ್ಯನಿರ್ವಹಿಸಲಿದ್ದಾರೆ. ಪಾಲಿಕೆಯಲ್ಲಿ ಹೆಲ್ತ್ ಇನಸ್ಪೆಕ್ಟರ್ಗಳ ಒಟ್ಟು 51 ಹುದ್ದೆಗಳು ಇದ್ದು, 35 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿಯೂ 9 ಜನ ಹೆಲ್ತ್ ಇನಸ್ಪೆಕ್ಟರ್ಗಳು ಗೌರವ ಧನ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮನೆ ಮನೆಯಿಂದ ಕಸ ಸಂಗ್ರಹಿಸಲು 272 ಟಿಪ್ಪರ್ ಗಳು ಇವೆ. ಇದರಲ್ಲಿ 42 ದುರಸ್ತಿಗೆ ಬಂದಿವೆ. ಹೊಸದಾಗಿ ಇನ್ನೂ 76 ಟಿಪ್ಪರ್ ಖರೀದಿಸಲಾಗುತ್ತದೆ ಎಂದರು.
ಉಪ ಮಹಾಪೌರ ಸಂತೋಷ ಚವ್ಹಾಣ, ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ ಹಾಗೂ ಅಧಿಕಾರಿಗಳು ಇದ್ದರು.