ಫುಟ್‌ಪಾತ್ ಮೇಲೆ ಕಟ್ಟಡ ಸಾಮಗ್ರಿ ಹಾಕಿದ್ದಕ್ಕೆ ಲಕ್ಷ ರೂ. ದಂಡ

foothpath blocked
Published on

ಬೆಂಗಳೂರು: ಪಾದಾಚಾರಿ ಮಾರ್ಗದಲ್ಲಿ ಕಟ್ಟಡ ಸಾಮಗ್ರಿ ಹಾಗೂ ಸಾರ್ವೆ ಅಳವಡಿಸಿ ನಾಗರಿಕರ ಓಡಾಟಕ್ಕೆ ಅಡ್ಡಿಯುಂಟು ಮಾಡಿದ್ದಕ್ಕೆ ಬಿಲ್ಡಿಂಗ್ ಮಾಲೀಕರೊಬ್ಬರಿಗೆ ಪಾಲಿಕೆಯು 1 ಲಕ್ಷ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ಬಿಬಿಎಂಪಿ ದಕ್ಷಿಣ ವಲಯದ ಎಂ.ಎನ್. ಕೃಷ್ಣರಾವ್ ರಸ್ತೆಯಲ್ಲಿ ಸ್ವತ್ತೊಂದರ ಮಾಲೀಕನು ಕಟ್ಟಡ ನಿರ್ಮಿಸುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಸಾರ್ವೆ ಅಳವಡಿಸಿ ಅದಕ್ಕೆ ಗ್ರೀನ್ ನೆಟ್ ಹಾಕಿ ಬಿಲ್ಡಿಂಗ್ ಕೆಲಸವನ್ನು ನಡೆಸುತ್ತಿದ್ದರು. ಇದಕ್ಕೆ ಸಂಬಂಧಿಸಿ ನೋಟೀಸ್ ನೀಡಿ ದುಪ್ಪಟ್ಟು ದಂಡ ವಿಧಿಸಲು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸೂಚನೆ ಆಧರಿಸಿ ವಲಯ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಅವರು ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿದ್ದರು. ಸಾರ್ವೆ ಅಳವಡಿಸಿದ್ದರಿಂದ ಅಲ್ಲಿನ ರಸ್ತೆಯುದ್ದಕ್ಕೂ ನಾಗರಿಕರು ಓಡಾಡದ ಸ್ಥಿತಿ ಉಂಟಾಗಿದ್ದನ್ನು ದೃಢಪಡಿಸಿಕೊಳ್ಳಲಾಯಿತು.

ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸಾರ್ವೆ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದನ್ನು ಗಮನಿಸಿ ಕಟ್ಟಡ ಮಾಲೀಕ ರಾಜೇಂದ್ರ ಕುಮಾರ್‌ಗೆ ಸೂಚನಾ ಪತ್ರ ನೀಡಲಾಯಿತು. ಬಳಿಕ ಕಟ್ಟಡ ಮಾಲೀಕರು 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಪಾಲಿಕೆಯ ಮುಖ್ಯ ಆಯುಕ್ತರ ಹೆಸರಿಗೆ ನೀಡಿದ್ದು, ಮತ್ತೆ ಈ ರೀತಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡದಂತೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net