ರಸ್ತೆ ಬದಿ ತ್ಯಾಜ್ಯ ಎಸೆದವಗೆ ಪಾಠ ಕಲಿಸಿದ ನೀರೆ ಪಿಡಿಒ

kasa
Published on

ಕಾರ್ಕಳ: ಕಾರ್ಕಳ -ಉಡುಪಿ ರಾಜ್ಯ ಹೆದ್ದಾರಿ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಬಳಿಯಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ಅದನ್ನು ಹೆಕ್ಕಿಸಿದ್ದಲ್ಲದೆ ದಂಡ 500 ರೂಪಾಯಿ ದಂಡ ವಿಧಿಸಿ, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ನೀರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಜಾರ್ಕಳದ ಸತ್ಯಪ್ರಕಾಶ್ ಎಂಬುವರು ದ್ವಿಚಕ್ರ ವಾಹನದಲ್ಲಿ ಬಂದು ಮದ್ಯದ ಬಾಟಲು, ರಟ್ಟು ಸಹಿತ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದರು. ಅದೇ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಕಾರಿನಲ್ಲಿ ಆ ರಸ್ತೆ ಮೂಲಕ ಹೋಗುತ್ತಿದ್ದರು. ದ್ವಿಚಕ್ರ ವಾಹನ ಸವಾರನನ್ನು ನಿಲ್ಲುವಂತೆ ಸೂಚಿಸಿದ್ದರೂ ಆತ ಲೆಕ್ಕಿಸದೆ ಹೊರಟು ಹೋಗಿದ್ದರು. ಬೆನ್ನಟ್ಟಿದ ಪಿಡಿಒ ಅನತಿ ದೂರದಲ್ಲಿಯೇ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿದರು.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಗಣೇಶ್ ಅವರನ್ನು ಬರುವಂತೆ ತಿಳಿಸಿ ಸ್ಥಳದಲ್ಲೇ ತ್ಯಾಜ್ಯ ಎಸೆದಾತನಿಗೆ 500 ರೂ. ದಂಡ ವಿಧಿಸಿದ್ದಾರೆ. ಘಟನಾ ಸ್ಥಳದಿಂದ ತ್ಯಾಜ್ಯವನ್ನು ತೆಗೆಸಿ ಎಸ್‌ಎಲ್‌ಆರ್‌ಎಂ ಘಟಕದ ವಾಹನಕ್ಕೆ ಹಾಕಲು ಸೂಚಿಸಿದ್ದಾರೆ.

ಸ್ವಚ್ಛ ಕಾರ್ಕಳ ಸುಂದರ ಕಾರ್ಕಳ ಘೋಷಣೆಯೊಂದಿಗೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯಾಡಳಿತ ಅಲ್ಲಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದರೂ, ವಿಘ್ನು ಸಂತೋಷಿಗಳು ಅಲ್ಲಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿವೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಪಿಡಿಒ ಅಂಕಿತಾ ನಾಯಕ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net