

Sindhi High School: ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಂಧಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಕನ್ನಡ ವಿರೋಧಿ ನಡೆಯು ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ಸಾಬೀತಾಗಿದೆ. ಈ ವಿಚಾರವಾಗಿ ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಶಾಲೆಗೆ ಸರ್ಕಾರ ನೀಡಿರುವ ನಿರಾಕ್ಷೇಪಣಾ ಪತ್ರ ಹಿಂಪಡೆಯಲು ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದೆ.
ನಗರದ ಸಿಂಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಮಾತನಾಡಿದರೆ ದಂಡ ವಿಧಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು, ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ವಲಯ ಉಪನಿರ್ದೇಶಕರಿಗೆ (ಡಿಡಿಪಿಐ) ಪತ್ರ ಬರೆದಿದ್ದಾರೆ. ಈ ಬಗ್ಗೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿವಂತೆ ಸೂಚಿಸಿದ್ದಾರೆ. ಅಲ್ಲದೆ, ವರದಿ ನೀಡಲು ಅದೇಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಡಿಪಿಐ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಸಿಂಧಿ ಶಾಲೆಗೆ ಭೇಟಿ ಕೊಟ್ಟಾಗ, ಕನ್ನಡ ವಿರೋಧಿ ನಡೆ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಈ ಘಟನೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಕೆಲ ಶಿಕ್ಷಕರು, ಕನ್ನಡ ಮಾತನಾಡಿದರೆ ದಂಢ ವಿಧಿಸುತ್ತಿರುವ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ವಿಷಯವಾಗಿ ಶಾಲೆಯ ಪ್ರಾಂಶುಪಾಲರೇ ತಾವು ದಂಢ ವಿಧಿಸುತ್ತಿರುವುದು ನಿಜ ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಅಲ್ಲದೆ, ಮುಂದುವರೆದು ಮಾತನಾಡಿರುವ ಬಿಳಿಮಲೆ, ಕನ್ನಡದ ಕೇಂದ್ರಸ್ಥಾನವಾದ ಬೆಂಗಳೂರು ನಗರದಲ್ಲಿನ ಪ್ರತಿಷ್ಠಿತ ಶಾಲೆಯೊಂದು ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ರೀತಿ ಕಸಿಯುತ್ತಿರುವುದು ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿರುವುದು ಒಪ್ಪುವಂತದ್ದಲ್ಲ. ಕನ್ನಡದ ಬಗ್ಗೆ ಲಘುಧೋರಣೆ ತೋರಿರುವುದು ರಾಜಧಾನಿಯಲ್ಲಿ ಕನ್ನಡದ ಹಿತದೃಷ್ಟಿಯಿಂದ ಅತ್ಯಂತ ನಕಾರಾತ್ಮಕ ಬೆಳವಣಿಗೆಯಾಗಿದೆ. ಇಂತಹ ಶಾಲೆಗಳ ಮೇಲೆ ಯಾವುದೇ ಕಠಿಣ ಕ್ರಮವಾಗದಿದ್ದಲ್ಲಿ, ಸಮಾಜಕ್ಕೆ ಉತ್ತಮ ಸಂದೇಶ ಹೋಗುವುದಿಲ್ಲ ಮತ್ತು ಕನ್ನಡ ತನ್ನ ನೆಲದಲ್ಲಿಯೇ ಪರಕೀಯ ಸ್ಥಾನಕ್ಕೆ ತೃಪ್ತಿಪಡಬೇಕಾದ ಅನಿವಾರ್ಯತೆಗೆ ಸಾಕ್ಷಿಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಏನಾದರೂ ಕಠಿಣ ಕ್ರಮವಾಗಬೇಕಾದರೆ ಶಿಕ್ಷಣ ಸಚಿವರಾಗಿ ತಾವು ಮನಸ್ಸು ಮಾಡಬೇಕಿದೆ. ತಮ್ಮ ಕಠಿಣ ಕ್ರಮದ ಸಂದೇಶ ಇಡೀ ರಾಜ್ಯವನ್ನು ತಲುಪಿದರೆ ಮಾತ್ರ ಬೇರೆ ಶಿಕ್ಷಣ ಸಂಸ್ಥೆಗಳಿಗೂ ಇದು ಪಾಠವಾಗುತ್ತದೆ. ನೆಲದ ಭಾಷೆಯನ್ನು ಉಲ್ಲಂಘಿಸಿದ ಸಿಂಧಿ ಪ್ರೌಢಶಾಲೆಯ ಮಾನ್ಯತೆಯನ್ನು ರದ್ದುಪಡಿಸಿದ್ದಲ್ಲಿ, ನಿಜಕ್ಕೂ ಕನ್ನಡದ ಗೌರವ ಉಳಿಸಿದಂತಗುತ್ತದೆ. ಈ ನಿಟ್ಟಿನಲ್ಲಿ ತಾವು ಕಠಿಣ ಕ್ರಮಕ್ಕೆ ಮುಂದಾಗಲು ಕೋರುತ್ತೇನೆ ಎಂದು ಬಿಳಿಮಲೆ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್)