ಜಾನುವಾರುಗಳನ್ನು ಬೀದಿಗೆ ಬಿಟ್ಟರೆ ದಂಡ

7-kgl-2,,,
ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹಿನ್ನ್ನೆಲೆಯಲ್ಲಿ ಸೋಮವಾರ ನಗರಸಭಾಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಅಧಿಕಾರಿಗಳ ಜತೆ ಸಭೆ ನಡೆಸಿದರು.
Published on

ಕೊಳ್ಳೇಗಾಲ: ಬಿಡಾಡಿ ದನಗಳು ಸಾರ್ವಜನಿಕ ರಸ್ತೆಗಳಲ್ಲಿ ಅಡ್ಡಾಡುವುದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸಿದರೂ ದನಗಳನ್ನು ಸಾರ್ವಜನಿಕ ಸ್ಥಳಗಳಿಗೆ ಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹಿನ್ನೆಲೆಯಲ್ಲಿ ಸೋಮವಾರ ನಗರಸಭಾಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳು ಸಂಚರಿಸುವುದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಹಲವು ದೂರುಗಳು ಬಂದಿವೆ. ಬಿಡಾಡಿ ದನಗಳ ಮಾಲೀಕರಿಗೆ ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿದ್ದೇವೆ. ಅಲ್ಲದೆ ಹೆಲ್ತ್ ಇನ್‌ಸ್ಪೆಕ್ಟರ್ ಚೇತನ್ ಅವರ ನೇತೃತ್ವದ ತಂಡ ಅರಿವು ಮೂಡಿಸಿದೆ. ಆದರೂ ದನಗಳನ್ನು ರಸ್ತೆಗೆ ಬಿಡಲಾಗುತ್ತಿದೆ ಎಂದು ರೇಖಾ ರಮೇಶ್ ಬೇಸರ ವ್ಯಕ್ತಪಡಿಸಿದರು.

ಜಾನುವಾರುಗಳನ್ನು ರಸ್ತೆ, ಬೀದಿಗೆ ಬಿಡುವುದ್ದರಿಂದ ಶಾಲಾ-ಕಾಲೇಜು ಮಕ್ಕಳು ಮತ್ತು ವಯೋವೃದ್ಧರು ಭಯ ಭೀತರಾಗಿ ಸಂಚಾರ ಮಾಡಬೇಕಿದೆ. ಈಗಾಗಲೇ ದನಗಳನ್ನು ಸಾರ್ವಜನಿಕ ಸ್ಥಳಗಳಿಗೆ ಬಿಟ್ಟವರಿಗೆ 5 ಸಾವಿರ ರೂ. ದಂಡ ಹಾಗೂ ಪಿಂಜಾರ ಪೋಲ್‌ಗೆ ರವಾನಿಸಲಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ನಾಳೆಯಿಂದ ಈ ಸೂಚನೆಗಳು ಪರಿಣಾಮಕಾರಿಯಾಗಿ ಜಾರಿಯಾಗಲಿದೆ. ಹಾಗಾಗಿ ಪಟ್ಟಣದ ಜಾನುವಾರು ಮಾಲೀಕರು ನಗರಸಭೆಗೆ ಸಹಕಾರ ನೀಡಬೇಕು ಎಂದರು.

ಮಂಗಳವಾರ ಪಟ್ಟಣಾದಾದ್ಯಂತ ಜಾಗೃತಿ ಮೂಡಿಸಬೇಕು. ದನಗಳನ್ನು ರಸ್ತೆ, ಬೀದಿಗೆ ಬಿಡದಂತೆ ನಗರಸಭೆ ವತಿಯಿಂದ ಪ್ರಚಾರ ಮಾಡಬೇಕು. ಅದನ್ನು ಮೀರಿ ರಸ್ತೆಗೆ ಬಿಡುವ ದನಗಳನ್ನು ಪಿಂಜಾರ ಪೋಲಿಗೆ ರವಾನಿಸಿ ಎಂದು ಸಭೆಯಲ್ಲಿದ್ದ ಹೆಲ್ತ್ ಇನ್‌ಸ್ಪೆೆಕ್ಟರ್ ಚೇತನ್ ನಿರ್ದೇಶನ ನೀಡಿದರು.

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ಮಾತನಾಡಿ, ಪಟ್ಟಣದಲ್ಲಿ ಬಿಡಾಡಿ ದನಗಳಿಂದ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಸಾರ್ವಜನಿಕರಿಂದ ನಿರಂತರ ದೂರುಗಳು ಕೇಳಿ ಬರುತ್ತಿವೆ. ಈಗಾಗಲೇ ದನಗಳನ್ನು ಸಾಕುವ ಮಾಲೀಕರಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರ ಸ್ಥಳಗಳಿಗೆ ದನಗಳನ್ನು ಬಿಟ್ಟರೆ ಪಿಂಜಾರಪೊಲ್‌ಗೆ ಬಿಡಲಾಗುವುದು ಎಂದರು.

ಈ ವೇಳೆ ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್, ಹೆಲ್ತ್ ಇನ್‌ಸ್ಪೆಕ್ಟರ್ ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net