

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಮೀನಿನ ಕ್ರಯ ಪತ್ರದ ದೃಢೀಕೃತ ನಕಲು ನೀಡುವಲ್ಲಿ ವಿಳಂಬ ಮತ್ತು ಕರ್ತವ್ಯಲೋಪ ಎಸಗಿದ ಹುಬ್ಬಳ್ಳಿಯ ಉಪ ನೊಂದಾಣಾಧಿಕಾರಿ ಕಚೇರಿ ಸಿಬ್ಬಂದಿಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಹುಬ್ಬಳ್ಳಿಯ ವಕೀಲ ನಾರಾಯಣರಾವ್ ಸಾಳುಂಕೆ ಎಂಬುವರು ತಮ್ಮ ಕಕ್ಷಿಗಾರರ ಪರ ಕೋರ್ಟ್ಗೆ ಹಾಜರುಪಡಿಸಲು ಉಪ ನೋಂದಣಾಽಕಾರಿ ಕಚೇರಿಯಿಂದ ಜಮೀನಿನ ಕ್ರಯಪತ್ರದ ದೃಢೀಕೃತ ನಕಲು ಪ್ರತಿ ಕೋರಿದ್ದರು. 210 ರೂಪಾಯಿ ಶುಲ್ಕ ತುಂಬಿ ಅರ್ಜಿ ಸಲ್ಲಿಸಿದ್ದರೂ ಅಗತ್ಯ ಕ್ರಯಪತ್ರದ ನಕಲನ್ನು ಕೊಟ್ಟಿರಲಿಲ್ಲ. ವಿಚಾರಿಸಿದಾಗ ಕಂಪ್ಯೂಟರ್ ಸಮಸ್ಯೆ ಎಂದು ಹೇಳಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೇಳಿದ್ದರು. 2ನೇ ಬಾರಿ ಅರ್ಜಿ ಹಾಕಿದಾಗ ಕಚೇರಿಯ ಸಿಬ್ಬಂದಿ ದೀಪಕ ಪತಂಗೆ ಮತ್ತು ಇತರರು, ಬೇರೆ ಜಮೀನಿನ ಮಾಹಿತಿಯುಳ್ಳ ಅಪೂರ್ಣ ದಸ್ತಾವೇಜಿನ ನಕಲು ಪ್ರತಿ ನೀಡಿದ್ದರು. ಅಗತ್ಯ ದಾಖಲೆ ಸಲ್ಲಿಸಲಾಗದೆ ವಕೀಲರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿತ್ತು.
ಇದನ್ನು ಪ್ರಶ್ನಿಸಿ ನಾರಾಯಣರಾವ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮೊರೆ ಹೋಗಿದ್ದರು. ದೂರಿನ ವಿಚಾರಣೆ ಮಾಡಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು, ಉಪ ನೋಂದಣಾಽಕಾರಿ ಕಚೇರಿಯ ಸಿಬ್ಬಂದಿ ಸೇವೆ ನೀಡುವಲ್ಲಿ ವಿಫಲರಾಗಿದ್ದಾರೆ. ಇದು ಗ್ರಾಹಕ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಚೇರಿಯ ಸಿಬ್ಬಂದಿ ರಾಜೇಶ್ವರಿ ಅರತಗಲಾ, ಹೀರಾಬಾಯಿ ಸೋನೆವಾನೆ ಹಾಗೂ ಗುಮಾಸ್ತ ದೀಪಕ ಪತಂಗೆ ಅವರಿಗೆ ಅರ್ಜಿ ಶುಲ್ಕದ ಹಣ ಮರಳಿ ಕೊಡಬೇಕು. ದೂರುದಾರರ ಮತ್ತು ಅವರ ಕಕ್ಷಿಗಾರರಿಗೆ ಆಗಿರುವ ಮಾನಸಿಕ ಹಿಂಸೆ ಮತ್ತು ಅನಾನುಕೂಲಕ್ಕೆ 50,000 ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು 10,000 ರೂ. ನೀಡಬೇಕು ಆಯೋಗ ಆದೇಶಿಸಿದೆ.
ವಕೀಲರಿಗೇ ತಪ್ಪು ದಾಖಲೆ ಕೊಟ್ಟರೆ ಸಾಮಾನ್ಯ ರೈತರ ಪಾಡು ಏನು ಎಂದು ಆಯೋಗ ಪ್ರಶ್ನಿಸಿದೆ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವಂತೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ನೊಂದಣಾಧಿಕಾರಿಗೆ ಸೂಚಿಸಿದೆ.