6 ತಿಂಗಳಲ್ಲಿ 1.78 ಲಕ್ಷ ರೂ.ದಂಡ ವಸೂಲಿ

food
Published on

 ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಆಹಾರ ಉದ್ಯಮಗಳಲ್ಲಿ ಗುಣಮಟ್ಟ, ಸುರಕ್ಷತೆ ಕಾಯ್ದುಕೊಳ್ಳದ 84 ಆಹಾರ ಉದ್ಯಮಗಳಿಗೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ನೋಟಿಸ್ ನೀಡಲಾಗಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ 1.78 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಆಹಾರಗಳಲ್ಲಿ ಕೃತಕ ಬಣ್ಣ ಬಳಸುವುದು, ಟೇಸ್ಟಿಂಗ್ ಪೌಡರ್‌ಗಳ ಬಳಕೆ ಸೇರಿ ಆಹಾರ ಉದ್ಯಮದ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದಿರುವುದು ಮತ್ತು ಗುಣಮಟ್ಟವಿಲ್ಲದ ಅಹಾರ ತಯಾರಿಕೆ ಸೇರಿ ಹಲವು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.20 ಉದ್ಯಮಗಳಿಗೆ ಸ್ವಚ್ಛತೆ ಬಗ್ಗೆ ಗಮನ ನೀಡದಿರುವ ಕಾರಣ 88 ಸಾವಿರ ರೂ.ದಂಡ ಹಾಕಲಾಗಿದೆ. ಆಹಾರ ಗುಣಮಟ್ಟದ ವಿಚಾರದಲ್ಲಿ 8 ಪ್ರಕರಣಗಳಲ್ಲಿ ಲ್ಯಾಬ್ನಲ್ಲಿ ಪರೀಕ್ಷೆ ವರದಿ ಅನುಸಾರ ಗುಣಮಟ್ಟದ ಕೊರತೆ ಬೆಳಕಿಗೆ ಬಂದಿದ್ದು. 90 ಸಾವಿರ ರೂ. ದಂಡ ಹಾಕಲಾಗಿದ್ದು ಸ್ವಚ್ಛತೆ ಕಾಪಾಡುವಂತೆ ಆಹಾರ ಉದ್ಯಮಗಳಿಗೆ ಸೂಚಿಸಿ ಸೂಚನಾ ಪತ್ರ ವಿತರಿಸಲಾಗಿದೆ.

ನಿಯಮ ಉಲ್ಲಂಘನೆ: ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಆಹಾರ ಉದ್ಯಮ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಅಷ್ಟೇ ಪ್ರಮಾಣದಲ್ಲಿ ಆಹಾರ ಗುಣಮಟ್ಟ ಹಾಗೂ ಸುರಕ್ಷತೆ ನಿಯಮಗಳನ್ನು ಉಲ್ಲಂಸಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನಾ ಇಲಾಖೆ ಅಧಿಕಾರಿಗಳು ನಾಲ್ಕೂ ತಾಲೂಕುಗಳಲ್ಲಿ ಸರಣಿಯಂತೆ ಪರಿಶೀಲನೆಯಲ್ಲಿ ತೊಡಗಿದ್ದು, ಸಾಕಷ್ಟು ಕಡೆಗಳಲ್ಲಿ ನೋಟಿಸ್ ಜತೆಗೆ ದಂಡ ವಸೂಲಿ ಮಾಡುವ ಮೂಲಕ ನಿಯಮ ಪಾಲನೆಗೆ ಬಗ್ಗೆ ಎಚ್ಚರಿಕೆ ರವಾನಿಸಲಾಗುತ್ತಿದೆ.

ಆಕರ್ಷಣೆಗೆ ಕೃತಕ ಬಣ್ಣ ಬಳಕೆ: ಬೀದಿ ಬದಿ ಹೋಟೆಲ್‌ಗಳು ಸೇರಿ ಎಲ್ಲ ಬಗೆಯ ಹೋಟೆಲ್, ಕಾಂಡಿಮೆಂಟ್ ಸ್ಟೋರ್ ಸೇರಿ ಹಲವು ಅಂಗಡಿಗಳಲ್ಲಿ ಆಹಾರಗಳು ಹೆಚ್ಚು ಆಕರ್ಷಣೀಯವಾಗಿ ಕಾಣಲು ವಿವಿಧ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಬಳಸಲಾಗುತ್ತಿದೆ, ಮುಖ್ಯವಾಗಿ ಕಬಾಬ್, ಗೋಬಿ ಮಂಚೂರಿಯಂತ ಆಹಾರಗಳಲ್ಲಿ ಕೃತಕ ಬಣ್ಣದ ಪ್ರಮಾಣ ಹೆಚ್ಚು ಬಳಕೆಯಾಗುತ್ತಿದೆ.ರೈಸ್‌ಬಾತ್, ಕೇಸರಿಬಾತ್‌ನಂತ ಬೆಳಗಿನ ತಿನಿಸುಗಳಲ್ಲಿ ಹೆಚ್ಚಿನ ಪ್ರಮಾಣದ ಬಣ್ಣ ಬಳಕೆಯಾಗುತ್ತಿರುವ ಅಪಾಯಕಾರಿ ಅಂಶಗಳು ತಪಾಸಣೆ ವೇಳೆ ಬೆಳಕಿಗೆ ಬರುತ್ತಿವೆ. ಇದರ ಜತೆಗೆ ಬಹುತೇಕ ಬೇಕರಿ ಉದ್ಯಮಗಳಲ್ಲೂ ವಿಷಕಾರಿ ಬಣ್ಣ ಹಾಗೂ ಟೇಸ್ಟಿಂಗ್ ಪೌಡರ್‌ಗಳ ಬಳಕೆ ಕಂಡುಬರುತ್ತಿದೆ. ಇದು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸುವ ಅಧಿಕಾರಿಗಳು ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ.

ಜೈಲು ಶಿಕ್ಷೆಯೂ ಇದೆ: ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಬಳಸಿದರೆ 7 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2026 ನಿಯಮದ 59ರ ಅಡಿ ಅವಕಾಶವಿದೆ ಈ ಹಿನ್ನೆಲೆಯಲ್ಲಿ ಆಹಾರ ಉದ್ಯಮದ ಮಾಲೀಕರು ನಿಯಮ ಉಲ್ಲಂಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್ ಬಳಕೆ ಅವ್ಯಾಹತ: ಇನ್ನೂ ಆಹಾರ ಉದ್ಯಮಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಕಟ್ಟುನಿಟ್ಟಿನ ಆದೇಶವಿದ್ದರೂ ಭಾಗಶಃ ಈ ನಿಯಮ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆಹಾರಗಳನ್ನು ಪಾರ್ಸೆಲ್ ಕಟ್ಟಿಕೊಡುವಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದು ಸಾಮಾನ್ಯ ಎನ್ನುವಂತಾಗಿದೆ. ಬೀದಿಬದಿಯ ಆಹಾರ ಉದ್ಯಮದಿಂದ ಹಿಡಿದು ದೊಡ್ಡ ಪ್ರಮಾಣದ ಆಹಾರ ಉದ್ಯಮಗಳವರೆಗೂ ಪ್ಲಾಸ್ಟಿಕ್ ಬಳಕೆ ಡೆಯುತ್ತಿದೆ. ಬಿಸಿಯಾದ ಆಹಾರವನ್ನು ತೆಳುವಾಗಿರುವ ಪ್ಲಾಸ್ಟಿಕ್ ಪೇಪರ್‌ಗಳಲ್ಲಿ ಬಳಸುವುದರಿಂದ ಕ್ಯಾನ್ಸರ್‌ನಂತ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಇನ್ನೂ ಆಹಾರ ತಯಾರು ಮಾಡುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಕುಡಿಯಲು ಶುದ್ಧ ನೀರು ಒದಗಿಸದಿರುವುದು ಆಹಾರ ತಯಾರಿಕೆಯಲ್ಲೂ ಶುದ್ಧ ನೀರಿನ ಬಳಕೆ ಇಲ್ಲದಿರುವುದು ಕಂಡುಬರುತ್ತಿದ್ದು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಆಹಾರ ಉದ್ಯಮಗಳ ತಪಾಸಣೆ ಚುರುಕುಗೊಳಿಸಲಾಗಿದೆ, ಆಹಾರ ತಯಾರಿಕೆ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಕೆ, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಬಳಕೆ, ಶುದ್ಧ ನೀರು ಪೂರೈಸದಿರುವುದು ಸೇರಿ ಹಲವು ಕಾರಣಗಳಿಂದ ಸಾಕಷ್ಟು ಉದ್ಯಮಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಕಳೆದ 6 ತಿಂಗಳಲ್ಲಿ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 1.78 ಲಕ್ಷ ರೂ ದಂಡ ವಿಧಿಸಲಾಗಿದೆ.

ಡಾ. ಧರ್ಮೇಂದ್ರ ಜಿಲ್ಲಾ ಅಂಕಿತಾಧಿಕಾರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net