ಸಮಸ್ಯೆಗೆ ಪರಿಹಾರ ಹುಡುಕುವುದು ಭದ್ರ ಬಾಲ್ಯದ ಆಶಯ

kdr3 (1) (1)
Published on

ಕಡೂರು: ಬಾಲ್ಯ ವಿವಾಹ, ಶಿಕ್ಷಣದ ಕೊರತೆ ಮತ್ತು ಲೈಂಗಿಕ ದೌರ್ಜನ್ಯಗಳಿಂದ ಮಹಿಳೆಯರು ಹಾಗೂ ಬಾಲಕಿಯರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಭದ್ರ ಬಾಲ್ಯದ ಪ್ರಧಾನ ಆಶಯ ಎಂದು ತಾಪಂ ಇಒ ಸಿ.ಆರ್. ಪ್ರವೀಣ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬಿಸಿಎಂ ಇಲಾಖೆ ಕಡೂರು, ತಾಲೂಕು ಆಡಳಿತ, ಜಿಲ್ಲಾ ಪಂಚಾಯತ್, ಕೆ.ಹೆಚ್.ಪಿ.ಟಿ ಬೆಂಗಳೂರು ಇಲಾಖೆಗಳ ಸಹಯೋಗದೊಂದಿಗೆ ಆಶಾ ಕಾರ್ಯರ್ತೆಯರು, ಅಂಗನವಾಡಿ, ಮುಖ್ಯಶಿಕ್ಷಕರು ಹಾಗೂ ಪಿಡಿಒಗಳಿಗೆ ಆಯೋಜಿಸಿದ್ದ ಎರಡು ದಿನಗಳ ಭದ್ರಬಾಲ್ಯ ಪ್ರಧಾನ ಆಶಯಗಳ ಗ್ರಾಪಂ ಮಟ್ಟದ ಸದಸ್ಯರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 24,436 ಬಾಲ್ಯ ಗರ್ಭಿಣಿಯರಾಗಿದ್ದಾರೆ. ಜಿಪಂ ಸಿಇಒ ಹೆಚ್.ಎಸ್.ಕೀರ್ತನ ಅವರು ಭದ್ರಬಾಲ್ಯ ಎಂಬ ಹೆಸರಿನಡಿ ಕಾರ್ಯಕ್ರಮ ರೂಪಿಸಿ ಅತಿ ಹೆಚ್ಚು ಬಾಲ್ಯ ಗರ್ಭಿಣಿಯರು ಕಂಡು ಬಂದ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಗಳ ಮೂಲಕ ಅರಿವು ಮೂಡಿಸಿ ಬಾಲ್ಯ ಗರ್ಭಿಣಿಯರನ್ನು ತಡೆಯಲು ಕಾವಲು ಸಮಿತಿಯಿಂದ ಕಾರ್ಯನಿರ್ವಹಿಸುವ ದೃಷ್ಠಿಯಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ ಮತ್ತು ಶಾಲಾ ಮುಖ್ಯಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇವರು ಕಾವಲು ಸಮಿತಿ ಸದಸ್ಯರಾಗಿದ್ದು, ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾವಲು ಸಮಿತಿಯನ್ನು ಸಕ್ರಿಯಗೊಳಿಸಿಕೊಂಡು ಪ್ರತಿ ಮಗುವು ಸುರಕ್ಷಿತ, ಗೌರವ ಪೂರ್ವಕ ಮತ್ತು ಸಬಲೀಕೃತ ಬಾಲ್ಯವನ್ನು ಅನುಭವಿಸುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಇಂತಹ ಪ್ರಕರಣಗಳು ಕಂಡು ಬಂದರೆ ಮೊದಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗುರುತಿಸಿ ಸಂಬಂಧಿಸಿದ ಇಲಾಖೆ ಹಾಗೂ ಪೊಲೀಸರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net