

ದೇವನಹಳ್ಳಿ: ಕಾಂಗ್ರೆಸ್ ಸರ್ಕಾರದ ಕನಸಾದ ಎಚ್‌ಎನ್ ವ್ಯಾಲಿಯ ಶುದ್ಧೀಕರಿಸಿದ ನೀರು ಪಟ್ಟಣ ಸೇರಿ ತಾಲೂಕಿನ ಆವತಿ, ಕೋಡಗುರ್ಕಿ, ವೆಂಕಟಗಿರಿಕೋಟೆ, ಸಾವಕನಹಳ್ಳಿ, ಚಿಕ್ಕಕೆರೆಗೆ ಹರಿಯುತ್ತಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ತಾಲೂಕಿನಲ್ಲಿ ಹೆಬ್ಬಾಳ ನಾಗವಾರ ಯೋಜನೆಯಲ್ಲಿ ಸಂಸ್ಕರಿಸಿದ ನೀರು ಹರಿದು ಬರುವ ಐದು ಕೆರೆಗಳನ್ನು ವಿಕ್ಷಣೆ ಮಾಡಿದ ಬಳಿಕ ಪಟ್ಟಣದ ಚಿಕ್ಕಕೆರೆ ಬಳಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ತಂದಿದ್ದ ಯೋಜನೆ ಪ್ರಾರಂಭವಾಗಿ ಇಂದು ಬಯಲು ಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆ ಹಾಗೂ ಜಾಲಾ ಹೋಬಳಿಯ ಹಲವು ಕೆರೆಗಳಿಗೆ ನೀರು ತುಂಬಿಸಲು ಸುಮಾರು 1000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಅದು ಕಾರ್ಯಗತವಾಗಿ ನೀರು ಹರಿಯುತ್ತಿದೆ ಎಂದರು.
ವೃಷಭಾವತಿ ಯೋಜನೆಯಿಂದ ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕುಗಳಿಗೆ ನೀರು ಹರಿಯುವ ಯೋಜನೆ ಕಾಂಗ್ರೆಸ್ ಸರ್ಕಾರವಿದ್ದಾಗ ತಂದಿದ್ದು, ಯೋಜನೆ ಸಾಕಾರಗೊಂಡರೆ ಜನರಿಗೆ ಅನುಕೂಲವಾಗಲಿದೆ ಎಂದರು.
ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ತಾಲೂಕಿನ 9 ಕೆರೆಗಳಿಗೆ ನೀರು ಹರಿಸುತ್ತಿದ್ದು, ಬೇಡಿಕೆ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ನೀರು ಹರಿಸಲಾಗುವುದು, ಇಲ್ಲಿನ ಕೆರೆಗಳಿಗೆ 210 ಎಂಎಲ್‌ಡಿ ನೀರಿನ ಅವಶ್ಯಕತೆಯಿದ್ದು, ಈಗಿನ ಮಟ್ಟದಲ್ಲಿ 90 ಎಂಎಲ್‌ಡಿ ನೀರು ಮಾತ್ರ ದೊರೆಯುತ್ತಿದೆ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಲಕ್ಷ್ಮೀನಾರಾಯಣ್, ಸದಸ್ಯೆ ರಾಧಮ್ಮ ಮುನಿರಾಜು, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ತೂಬಗೆರೆ ಬ್ಲಾಕ್ ಅಧ್ಯಕ್ಷ ರಂಗಪ್ಪ, ತಾಪಂ ಸದಸ್ಯರಾದ ಮಂಜುನಾಥ್, ದಿನ್ನೂರು ವೆಂಕಟೇಶ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಖಾದಿ ಬೋರ್ಡ್ ಅಧ್ಯಕ್ಷ ನಾಗೇಗೌಡ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಶ್, ತಾಲೂಕು ಅಧ್ಯಕ್ಷ ಸುಮಂತ್, ಬುಳ್ಳಹಳ್ಳಿ ರಾಜಪ್ಪ ಮತ್ತಿತರರಿದ್ದರು.