ಹಳಿಂಗಳಿ ಗ್ರಾಮದ ರಾಮಪ್ಪನನ್ನು ಹುಡುಕಿಕೊಡಿ...!

Find Ramappa from Halingali village...!
ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವ ಇಮೇಜ್‌ಗಳು.
Published on

ತೇರದಾಳ: ಸರ್ಕಾರ ಯಾವುದಾದರೂ ಹುದ್ದೆಗೆ ನೇಮಕ ಮಾಡುತ್ತದೆ ಎಂದರೆ ಆ ವ್ಯಕ್ತಿಯ ಪೂರ್ವಾಪರ ವಿಚಾರಿಸಿ, ಅರ್ಹನಾಗಿದ್ದರೆ ನೇಮಕ ಮಾಡುವುದು ಸಾಮಾನ್ಯ. ಆದರೆ ಹಳಿಂಗಳಿ ಎಂಬ ಗ್ರಾಮಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸದಸ್ಯನನ್ನಾಗಿ ನೇಮಿಸಿರುವ ರಾಮಪ್ಪ ಬಸಪ್ಪ ತೇಲಿ ಎಂಬಾತನ ಮಾಹಿತಿ ತಿಳಿಯದೇ ಹಳಿಂಗಳಿ ಗ್ರಾಮಸ್ಥರೇ ಹುಡುಕುತ್ತಿದ್ದಾರೆ...!

ಹೌದು. ಇದು ವಿಚಿತ್ರವಾದರೂ ಸತ್ಯ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗಬೇಕೆಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಪ್ರತಿ ತಾಲೂಕು, ನಗರ, ಗ್ರಾಮಗಳ ಹಂತದಲ್ಲೂ ಅನುಷ್ಠಾನ ಸಮಿತಿ ಸದಸ್ಯರನ್ನು ನೇಮಕಮಾಡಿ ಆದೇಶ ಹೊರಡಿಸಿದೆ.

ಹಾಗೆಯೇ ತೇರದಾಳ ತಾಲೂಕಿನ ಪಟ್ಟಣ ಸೇರಿದಂತೆ ಎಲ್ಲಾ ಗ್ರಾಮಗಳಿಗೂ ಸದಸ್ಯರನ್ನು ನೇಮಕ ಮಾಡಿದೆ. ಆ ಆದೇಶ ಪಟ್ಟಿಯಲ್ಲಿ ಹಳಿಂಗಳಿ ಗ್ರಾಮಕ್ಕೆ ಸದಸ್ಯರನ್ನಾಗಿ ರಾಮಪ್ಪ ಬಸಪ್ಪ ತೇಲಿ ಎಂಬಾತನನ್ನು ನೇಮಿಸಿದೆ. ಆದರೆ ಈ ಹೆಸರಿನ ವ್ಯಕ್ತಿಯೇ ಗ್ರಾಮದಲ್ಲಿಲ್ಲ. ಹಾಗಾದರೆ ಈ ಹೆಸರನ್ನು ತಿಳಿಸಿದ ಮಹಾನುಭಾವ ಯಾರು? ಎಂದು ಕಾಂಗ್ರೆಸ್ ನಾಯಕರೇ ಆಶ್ಚರ್ಯಚಕಿತರಾಗಿದ್ದಾರೆ. ಇದು ವರಿಷ್ಠರ ಯಡವಟ್ಟೋ ಅಥವಾ ಸ್ಥಳೀಯ ಬಾತ್ಮಿದಾರರ ಯಡವಟ್ಟೋ ಇನ್ನೂ ತಿಳಿಯುತ್ತಿಲ್ಲ.

ಬಾಗಲಕೋಟೆ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶಪಟ್ಟಿಯಲ್ಲಿ ತೇರದಾಳ ತಾಲೂಕಿನ ಅಧ್ಯಕ್ಷರನ್ನಾಗಿ ನ್ಯಾಮಣ್ಣ ಸಾವಂತನ್ನವರ, ಸದಸ್ಯರನ್ನಾಗಿ ತೇರದಾಳದ ಶಿವಪ್ಪ ಮಿರ್ಜಿ, ಕುಮಾರ ಪಾತ್ರೋಟ, ಅಲ್ಲಪ್ಪ ಮಡಿವಾಳ, ರಾಚಪ್ಪ ನಿಂಗನೂರ, ಗೋಲಬಾವಿಗೆ ಮಲ್ಲಪ್ಪ ಉಮರಾಣಿ, ಮಾರುತಿ ಮುಗಳಖೋಡ. ಸಸಾಲಟ್ಟಿಗೆ ರಾಜು ಸನದಿ, ಆರತಿ ಅಶೋಕ ಉಳ್ಳಾಗಡ್ಡಿ, ಕಾಲತಿಪ್ಪಿಗೆ ವೆಂಕಪ್ಪ ಭೀಮಪ್ಪ ರಡ್ಡಿ, ತೇರದಾಳದ ಶಿವಾನಂದ ನಡುವಿನಕೇರಿ, ತಮದಡ್ಡಿಗೆ ಜಗದೀಶ ಝಾರೆ, ಹಳಿಂಗಳಿಗೆ ರಾಮಪ್ಪ ಬಸಪ್ಪ ತೇಲಿ, ಕಾಲತಿಪ್ಪಿಗೆ ಹಣಮಂತ ಸದಾಶಿವ ಜಗದಾಳ, ಯರಗಟ್ಟಿಗೆ ಶಂಕರ ಹಳ್ಳುರ, ಸದಸ್ಯ ಕಾರ್ಯದರ್ಶಿಯಾಗಿ ರಬಕವಿ/ಬನಹಟ್ಟಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ನಾದರೂ ಈ ಆದೇಶವನ್ನು ಗಂಭೀರವಾಗಿ ಪರಿಗಣಿಸಿ, ವ್ಯಕ್ತಿಯನ್ನು ಹುಡುಕಿಕೊಡಬೇಕು ಅಥವಾ ಬೇರೆ ಅರ್ಹರನ್ನು ನೇಮಿಸಬೇಕಿದೆ.

ಫೇಸ್‌ಬುಕ್‌ನಲ್ಲೂ ಅಸಮಾಧಾನ

ಸ್ಥಳೀಯ ಕಾಂಗ್ರೆಸ್ ಯುವ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷರ ಪುತ್ರ ಮಹಾವೀರ ಉಗಾರ ಫೇಸಬುಕ್‌ನಲ್ಲಿ ಕಾಮೆಂಟ್ ಮಾಡಿ ತಮ್ಮ ಅಸಮಾಧಾನವನ್ನು ಹಾಕಿದ್ದು, ಅದರಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರ ನೇಮಕಾತಿಯಲ್ಲಿ ಹಳಿಂಗಳಿ ಗ್ರಾಮಕ್ಕೆ ನೇಮಕಗೊಂಡ ರಾಮಪ್ಪ ಬಸಪ್ಪ ತೇಲಿ ಎಂಬ ವ್ಯಕ್ತಿ ನಮ್ಮ ಊರಲ್ಲೇ ಯಾರೂ ಇಲ್ಲ. ನಿಮಗೇ ಹೆಸರು ಕೊಟ್ಟವರು ಬೇಕೆಂದೇ ತಪ್ಪು ಹೆಸರು ಕೊಟ್ಟು ಆಮೇಲೆ ಸರಿಪಡಿಸಿಕೊಳ್ಳುವ ಯೋಜನೆ ರೂಪಿಸಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಹಳಿಂಗಳಿ ಗ್ರಾಮದಲ್ಲಿ ರಾಮಪ್ಪ ಬಸಪ್ಪ ತೇಲಿ ಎಂಬ ಹೆಸರಿನ ವ್ಯಕ್ತಿಯೇ ಇಲ್ಲ. ಆದೇಶ ಪಟ್ಟಿ ತಯಾರಿಸುವಾಗ ನಮ್ಮ ಗಮನಕ್ಕೂ ಯಾವುದೇ ಮುಖಂಡರು ತಂದಿಲ್ಲ. ಯಾರನ್ನೂ ಕೇಳಿ ಪಟ್ಟಿ ತಯಾರಿಸಲಾಗಿದೆ ಎಂಬ ಮಾಹಿತಿಯೂ ಇಲ್ಲ. ಪ್ರದೀಪ ನಂದೆಪ್ಪನವರ, ಅಧ್ಯಕ್ಷರು, ಗ್ರಾಪಂ ಹಳಿಂಗಳಿ, ಕಾಂಗ್ರೆಸ್ ಮುಖಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net