

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಕಾಶಿ ಧಾರವಾಡದಲ್ಲಿ ಕೊಲೆಯಂತಹ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಇದೀಗ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ರೂಪಿಸಿರುವುದು ಖಂಡನೀಯ. ಪೊಲೀಸರು ಸೂಕ್ತ ತನಿಖೆ ನಡೆಸಿ ಇದರ ಹಿಂದಿರುವವರನ್ನು ಪತ್ತೆ ಹಚ್ಚಬೇಕು ಎಂದು ಎಐಸಿಸಿ ಮಾಜಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಅಮಾಯಕ ಯುವಕರನ್ನು ಬಳಸಿಕೊಂಡು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಗಾಂಜಾ ಸೇರಿ ಇತರ ಮಾದಕ ವಸ್ತುಗಳನ್ನು ಸೇವನೆ ಮಾಡುವ ಯುವಕರು ಮತ್ತೊಬ್ಬರ ಮಾತು ಕೇಳಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದರು.
ಈ ಹಿಂದೆ ಸಹ ಇಸ್ಮಾಯಿಲ್ ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದು 2019, 2020ರಲ್ಲಿ ಸುಮಾರು 3 ಬಾರಿ ಅಂದಿನ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಆದರೆ ಇದೀಗ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಸ್ವತಃ ಇಸ್ಮಾಯಿಲ್ ಹೇಳಿದ್ದಾರೆ. ಹೀಗಾಗಿ ಈ ಸಂಚಿನ ಹಿಂದೆ ಯಾರೇ ಇದ್ದರೂ ಪಕ್ಷಾತೀತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕಲ್ಲದೆ, ಇಸ್ಮಾಯಿಲ್ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವಿಷಯವಾಗಿ ಶುಕ್ರವಾರ ಅಂಜುಮನ್ ಸಂಸ್ಥೆ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರತಿಭಟನೆಗೆ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯರು, ಕಾರ್ಯಕರ್ತರು, ಮುಖಂಡರು ಸೇರಿ ಎಲ್ಲರ ಬೆಂಬಲ ಇದೆ. ಈಗಾಗಲೇ ಪೊಲೀಸರು ಗಾಂಜಾ ಸೇವನೆ, ಮಾರಾಟ ಮಾಡುವವರನ್ನು ಬಂಧನ ಮಾಡುತ್ತಿರುವ ಕ್ರಮ ಸ್ವಾಗತಾರ್ಹ. ಯುವಕರು ನಶೆಯಲ್ಲಿ ಅನಾಹುತ ಮಾಡದಂತೆ ಎಚ್ಚರ ವಹಿಸಬೇಕಿದೆ. ಹೀಗಾಗಿ ಈ ಸಂಚಿನ ಹಿಂದಿರುವವರನ್ನು ಕೂಡಲೇ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಬಸವರಾಜ ಕಿತ್ತೂರ, ನಾಗರಾಜ ಗುರಿಕಾರ, ಶಂಭು ಸಾಲಿಮನಿ, ತುಳಜಪ್ಪ ಪೂಜಾರ, ಕವಿತಾ ಕಬ್ಬೇರ, ಮಯೂರ ಮೋರೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.