ಸಾಂಸ್ಕೃತಿಕ ನಗರಿಯಲ್ಲಿ ಹಾಡಹಗಲೇ ಫೈನಾನ್ಸಿಯರ್ ಹತ್ಯೆ

9
Published on

ಮೈಸೂರು:  ಸಾಂಸ್ಕೃತಿಕ ನಗರಿಯಲ್ಲಿ ಹಾಡಹಗಲೇ ಅರಮನೆ ಸಮೀಪ ವ್ಯಕ್ತಿಯೊಬ್ಬನನ್ನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಕೊಲೆ ನಡೆದಿದ್ದು, ನಗರದ ಜನತೆ ಆತಂಕಗೊಂಡಿದ್ದಾರೆ.

ಕ್ಯಾತಮಾರನಹಳ್ಳಿಯ ನಿವಾಸಿ, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವೆಂಕಟೇಶ್ ಅಲಿಯಾಸ್ ಗಿಲಿಗಿಲಿ(45) ಕೊಲೆಯಾದವ. ಅರಮನೆ ಮುಂಭಾಗದ ದಸರಾ ವಸ್ತುಪ್ರದರ್ಶನದ ಟ್ಯಾಂಕ್‌ಬಂಡ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ 11.30 ಗಂಟೆಯಲ್ಲಿ ವೆಂಕಟೇಶ್ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳು ಕಾರನ್ನು ಅಡ್ಡ ಹಾಕಿ ನಿಲ್ಲಿಸಿ, ವೆಂಕಟೇಶ್ ಮೇಲೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಕಾರಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ದಸರಾ ಮುಗಿದ ಬೆನ್ನಲ್ಲೇ ನಡೆದ ಕೊಲೆಯಿಂದ ಮೈಸೂರು ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ಮಾಡುತ್ತಿದ್ದ ದೃಶ್ಯವನ್ನು ದಾರಿಹೋಕರು ಫೋಟೋ ತೆಗೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಮತ್ತು ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳದೊಂದಿಗೆ ಬೆರಳಚ್ಚು ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿ ಸಾಕ್ಷೃಗಳನ್ನು ಕಲೆ ಹಾಕಿತು.

ಮಹತ್ವದ ಸುಳಿವು: ಕಾರಿನಿಂದ ಎಳೆದು ಹಲ್ಲೆ ನಡೆಸುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದರಿಂದ ಪೊಲೀಸರಿಗೆ ಆರೋಪಿಗಳ ಪತ್ತೆಗೆ ಸುಳಿವು ಸಿಕ್ಕಂತಾಗಿದೆ. ದಾಳಿ ನಡೆಸುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಪ್ರತಿಕಾರ ಕಾರಣ?

ಐದು ತಿಂಗಳ ಹಿಂದೆ ತಿ.ನರಸೀಪುರ ರಸ್ತೆಯ ವರುಣ ಗ್ರಾಮದ ಲಾಡ್ಜ್ ಬಳಿ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್ ಕೊಲೆಯಾಗಿತ್ತು. ಈತನೊಂದಿಗೆ ಕೊಲೆಯಾದ ವೆಂಕಟೇಶ್‌ಗೂ ಸಂಪರ್ಕವಿದ್ದು, ಹಣಕಾಸು ವ್ಯವಹಾರ ನಡೆಸಿದ್ದ. ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರ ನೀಡಿದ್ದ ಎನ್ನಲಾಗಿದ್ದು, ಇದಕ್ಕೆ ಪ್ರತಿಕಾರವಾಗಿ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದುಷ್ಕರ್ಮಿಗಳ ಗುಂಪು ಹಲವು ದಿನಗಳಿಂದ ವೆಂಕಟೇಶ್‌ನ ಚಲನವಲನ ಗಮನಿಸಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಕ್ಯಾತಮಾರನಹಳ್ಳಿಯ ಮನೆಯಿಂದ ಹೊರಟ ವೆಂಕಟೇಶ್‌ನನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ವಸ್ತುಪ್ರದರ್ಶನ ಎದುರಿನ ರಸ್ತೆಯಲ್ಲಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಇಬ್ಬರು ಪತ್ನಿಯರು: ವೆಂಕಟೇಶ್‌ಗೆ ಇಬ್ಬರು ಪತ್ನಿಯರಿದ್ದಾರೆ. ನಾವಿಬ್ಬರೂ ಹೊಂದಾಣಿಕೆಯಿಂದ ಅವರೊಂದಿಗೆ ಇದ್ದೆವು. ನಮಗೆ ಎಂದಿಗೂ ಆತ ಮೋಸ ಮಾಡಿಲ್ಲ ಎಂದು ಮೃತನ ಪತ್ನಿಯೊಬ್ಬರು ಕಣ್ಣೀರು ಹಾಕಿದರು. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net