

ಮುಂಡಗೋಡ: ಪಟ್ಟಣದ ಫೈನಾನ್ಸಿಯರ್ ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಶಬ್ಬಿರಹ್ಮದ ಬಿಜಾಪುರ ಹಾಗೂ ಸಾಧಿಕ್ ವಾಲೀಕಾರ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಆರೋಪಿಗಳನ್ನು ಬಂಧಿಸಿದಂತಾಗಿದೆ. ಪಟ್ಟಣದಲ್ಲಿ ಜಮೀರ ಅಹ್ಮದ ದರ್ಗಾವಾಲೆ ಎಂಬಾತನನ್ನು ಜ.9ರಂದು ಅಪಹರಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಹನ್ನೊಂದು ಆರೋಪಿಗಳನ್ನು ಬಂಧಿಸಿ 17,75,500 ರೂ. ಜಪ್ತಿಮಾಡಲಾಗಿತ್ತು. ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಪರಶುರಾಮ ಮಿರ್ಜಗಿ, ಹನಮಂತ ಕುಡಗುಂಚಿ, ಸಿಬ್ಬಂದಿಗಳಾದ ಅನ್ವರಖಾನ ಇಸ್ಮಾಯಿಲ್‌ಖಾನ್, ಕೋಟೇಶ ನಾಗರವಳ್ಳಿ, ಮಹಾಂತೇಶ ಮಹಾಂತೇಶ ಮುಧೋಳ, ತಿರುಪತಿ ಚೌಡಣ್ಣನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಮೀರ ಬಳಿ ಹಣ ಇದೆ. ಈತನನ್ನು ಅಪಹರಿಸಿದರೆ ಹಣ ಮಾಡಬಹುದು ಎಂದು ತಿಳಿದು ಆರೋಪಿಗಳು ಪಟ್ಟಣದ ಪಾಂಡುರಂಗ ಹೋಟೆಲ್‌ನಲ್ಲಿ ಪ್ಲ್ಯಾನ್ ರೂಪಿಸಿದ್ದರು. ಅಪಹರಣದ ಎರಡು ದಿನ ಮುಂಚೆ ಒಂಬತ್ತು ಜನರ ತಂಡ ಬೇರೆ ಬೇರೆ ಕಡೆ ನಿಂತು ಜಮೀರ ಚಲನವಲನ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಕೊನೆಯಲ್ಲಿ ಶಾಸಕರ ಮಾದರಿ ಶಾಲೆ ಹತ್ತಿರ ಜಮೀರನನ್ನು ಹೆದರಿಸಿ ಅಪಹರಣ ಮಾಡಿ ಹದಿನೆಂಟು ಲಕ್ಷ ರೂಪಾಯಿ ಪಡೆದು ಬಿಟ್ಟು ಕಳುಹಿಸಿದ್ದರು ಎಂದು ಸಿಪಿಐ ರಂಗನಾಥ ನೀಲಮ್ಮನವರ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಬಡ್ಡಿ ವ್ಯವಹಾರ ಕಂಡು ಬಂದರೆ ಇಲ್ಲವೇ ಯಾರಿಗಾದರೂ ತೊಂದರೆ ಕೊಟ್ಟಿದ್ದರೆ ಅಂತಹವರ ವಿರುದ್ಧ ಯಾವ ಭಯವಿಲ್ಲದೆ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹಾಗೂ ಬಡ್ಡಿ ವ್ಯವಹಾರ ಮಾಡುವರ ವಿರುದ್ಧ ಸಿಪಿಐ ಖಡಕ್ ಎಚ್ಚರಿಕೆ ನೀಡಿದ್ದಾರೆ.