ಆರ್ಥಿಕ ಸೌಲಭ್ಯ ನೀಡದೇ ಸತಾಯಿಸುತ್ತಿದ್ದಾರೆ

th talawar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹೈ ಕೋರ್ಟ್ ಧಾರವಾಡ ಪೀಠದ ಆದೇಶವಿದ್ದರೂ ನಿವೃತ್ತಿ ಬಳಿಕದ ಆರ್ಥಿಕ ಸೌಲಭ್ಯಗಳನ್ನು ನೀಡದೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಪಿ. ಸುರೇಶ ತೊಂದರೆ ನೀಡುತ್ತಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ಟಿ.ಎಚ್. ತಳವಾರ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಆಲೂರು ವೆಂಕಟರಾವ್ ಸ್ಮಾರಕ ಪಪೂ ಮಹಾವಿದ್ಯಾಲಯದಲ್ಲಿ ಸುಮಾರು 37ವರ್ಷಗಳ ಸೇವೆಯ ಬಳಿಕ ನಾನು 2022ರ ಮೇ 31ರಂದು ನಿವೃತ್ತಿ ಹೊಂದಿದ್ದೇನೆ. ಈ ಅವಧಿಯಲ್ಲಿ 3 ಹೆಚ್ಚುವರಿ ವೇತನ ಬಡ್ತಿ, 5 ವಾರ್ಷಿಕ ವೇತನ ಬಡ್ತಿ ನೀಡಿರುವುದಿಲ್ಲ. ಈ ಬಗ್ಗೆ ಹೈ ಕೋರ್ಟ್ ಧಾರವಾಡ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನನಗೆ ಬರಬೇಕಾದ ಎಲ್ಲ ಆರ್ಥಿಕ ಸೌಲಭ್ಯ ನೀಡುವಂತೆ ಆದೇಶಿಸಿದೆ. ಆದರೆ, ಪಪೂ ಉಪ ನಿರ್ದೇಶಕರು ಕೋರ್ಟ್ ಆದೇಶ ಪಾಲಿಸುತ್ತಿಲ್ಲ ಎಂದು ಹೇಳಿದರು.

2019ರ ಮೇ ತಿಂಗಳಿಂದ ಡಿಸೆಂಬರ್ 18ರವರೆಗೆ ನನಗೆ ಬರಬೇಕಾದ ಬಾಕಿ ವೇತನ ಕೊಟ್ಟಿಲ್ಲ. ಈ ಕುರಿತು ಹೈ ಕೋರ್ಟ್​ನಲ್ಲಿ ರಿಟ್ ಅರ್ಜಿ ದಾಖಲಿಸಿದಾಗ ಸೂಕ್ತ ಕ್ರಮ ಕೈಗೊಳ್ಳುವಂತೆ ಪಪೂ ಶಿಕ್ಷಣ ಇಲಾಖೆಯ ಡಿಡಿ ಅವರಿಗೆ ಸೂಚಿಸಿದೆ. ಬಾಕಿ ವೇತನ ಹಾಗೂ ನಿವೃತ್ತ ಬಳಿಕ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಮುಖ್ಯಮಂತ್ರಿಯವರ ಆದೇಶಕ್ಕೂ ಡಿಡಿಪಿಯು ಕೆ.ಪಿ. ಸುರೇಶ ಮಾನ್ಯ ಮಾಡಿಲ್ಲ ಎಂದರು.

ಬಾಕಿ ವೇತನದ ಬಗ್ಗೆ ಕೇಳಿದರೆ ಉಪ ನಿರ್ದೇಶಕರು ಆ ಅವಧಿಯಲ್ಲಿ ನಾನು ಗೈರು ಇದ್ದೇನೆ ಎಂದು ಮೌಖಿಕವಾಗಿ ಹೇಳುತ್ತಾರೆ. ಆದರೆ, ಲಿಖಿತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೈರಾಗಿರುವ ಬಗ್ಗೆ ಕಾಲೇಜ್​ನ ಆಡಳಿತ ಮಂಡಳಿ ನನಗೆ ನೋಟಿಸ್ ನೀಡಿದ್ದು ಸಹ ಇರುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೋಹನ ಗುಡಿಸಲಮನಿ, ಎಂ. ಭರತ್, ಅರುಣ ಹಿರೇಹಾಳ ಹಾಗೂ ಕವಿತಾ ನಾಯ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net