ಅನಧಿಕೃತ ಲಿಂಕ್‌ಗಳನ್ನು ತೆರೆಯಬೇಡಿ: ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಸಲಹೆ

Financial Inclusion Perfection Campaign Mandya
Published on

ಮಂಡ್ಯ: ಇತ್ತೀಚೆಗೆ ಸೈಬರ್ ಕ್ರೈಂಗಳು ಹೆಚ್ಚಾಗಿದ್ದು, ಅಕ್ಷರಸ್ಥರು ಕೂಡ ಹೆಚ್ಚಾಗಿ ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಒಟಿಪಿ ಹಂಚಿಕೊಳ್ಳುವಾಗ ಎಚ್ಚರವಹಿಸಿ. ಮುಖ್ಯವಾಗಿ ಅನಧಿಕೃತ ಲಿಂಕ್‌ಗಳನ್ನು ತೆರೆಯಬೇಡಿ ಎಂದು ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಸಲಹೆ ನೀಡಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡಾ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಸೇರ್ಪಡೆ ಪರಿಪೂರ್ಣತೆ ಅಭಿಯಾನದಲ್ಲಿ ಮಾತನಾಡಿದ ಅವರು, ನಂಬಿಕೆಗೆ ಅರ್ಹವಾಗಿರುವ ಆ್ಯಪ್‌ಗಳಲ್ಲಿ ಮಾತ್ರ ವ್ಯವಹಾರ ಮಾಡಿ. ಸೈಬರ್ ವಂಚನೆಗೊಳಗಾದಾಗ 1930 ಸಹಾಯವಾಣಿಗೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.

ಹಣಕಾಸು ಸೇವೆಗಳ ಇಲಾಖೆ ವತಿಯಿಂದ ದೇಶಾದ್ಯಂತ 2.70 ಲಕ್ಷ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳಲ್ಲಿ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ನಡೆಯುತ್ತಿದೆ. ಗ್ರಾಮಮಟ್ಟದಲ್ಲಿ ಖಾತೆ ಹೊಂದಿಲ್ಲದವರಿಗೆ ಜನ್‌ಧನ್ ಯೋಜನೆಯಡಿ ಉಚಿತ ಖಾತೆ ತೆರೆಯುವುದು, ಈಗಾಗಲೇ ಖಾತೆ ಹೊಂದಿರುವವರಿಗೆ ಜನ್‌ಧನ್ ಯೋಜನೆ ಸೇರಿ ಇತರೆ ಖಾತೆಗಳಿಗೂ ಕೆವೈಸಿ ಮಾಡುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಇರಲಿದೆ ಎಂದರು.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮೂಲಕ 18 ರಿಂದ 50 ವರ್ಷ ಒಳಪಟ್ಟವರು ವಾರ್ಷಿಕ ಕೇವಲ 436 ರೂ ಪಾವತಿಸಿ ಎರಡು ಲಕ್ಷ ರೂ ಮೌಲ್ಯದ ಜೀವವಿಮೆ ಪಡೆಯಬಹುದು. ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಯಡಿ 18 ರಿಂದ 70 ವರ್ಷದವರು ವಾರ್ಷಿಕ ಕೇವಲ 20 ರೂ ಪಾವತಿಸಿ 2 ಲಕ್ಷ ರೂ ಅಪಘಾತ ವಿಮೆ ಪಡೆಯಬಹುದು. ಯುವಜನರ ಮುಂದಿನ ಜೀವನದ ಭದ್ರತೆಗಾಗಿ 18 ರಿಂದ 40 ವರ್ಷದವರಿಗಾಗಿ ಅಟಲ್ ಪಿಂಚಣಿ ಯೋಜನೆ ಜಾರಿಯಲ್ಲಿದ್ದು, ಸಣ್ಣ ಉಳಿತಾಯ ಮೂಲಕ 60 ವರ್ಷದ ನಂತರ 1000 ದಿಂದ 5,000 ರೂ ಪಿಂಚಣಿ ಪಡೆಯಬಹುದಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಕೆರಗೋಡು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್ ಉದ್ಘಾಟಿಸಿದರು. ಪಿಡಿಒ ವಿನಯ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಮಹೇಶ್, ಕೃಷಿ ಪತ್ತಿನ ಸಂಘದ ನಿರ್ದೇಶಕ ಚನ್ನೇಗೌಡ, ಬ್ಯಾಂಕ್ ಮಿತ್ರರ ಮೇಲ್ವಿಚಾರಕ ಚಂದನ್ ಇತರರಿದ್ದರು. ಆಂದೋಲನದಲ್ಲಿ ಉಚಿತವಾಗಿ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net