ವಿದ್ಯಾರ್ಥಿನಿ ಕುಟುಂಬಕ್ಕೆ ನೆರವು

26 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಂದೆಯ ಸಾವಿನ ದಿನ ಪರೀಕ್ಷೆ ಬರೆದ ನವಲಗುಂದ ಪಟ್ಟಣದ ಗಾಂಧಿಬಜಾರ್ ನಿವಾಸಿ ಶಬಾನಾ ಪಠಾಸು ಅವರ ಮನೆಗೆ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಽಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನವಾದ ಮಾ. 21ರ ಬೆಳಗಿನ ಜಾವ ಶಬಾನಾ ತಂದೆ ನೂರಹುಸೇನ್ ಮೃತಪಟ್ಟಿದ್ದರು. ನೋವಿನ ನಡುವೆಯೂ ಪರೀಕ್ಷೆ ಬರೆದ ಶಬಾನಾ, ನಂತರ ತಂದೆಯ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದಳು. ವಿಷಯ ತಿಳಿದ ಶಾಸಕ ಹಾಗೂ ಅಧಿಕಾರಿಗಳು ಶಬಾನಾ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ಆಶ್ರಯ ಮನೆ ಮಂಜೂರಾಗಿದ್ದು, ಶಾಸಕ ಕೋನರಡ್ಡಿ ಅವರು 3 ತಿಂಗಳಲ್ಲಿ ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದರು. ಅಲ್ಲಿಯವರೆಗೆ ಬಾಡಿಗೆ ಮನೆಯ ವೆಚ್ಚಕ್ಕೆ ಹಣಕಾಸಿನ ನೆರವು ನೀಡಿದ್ದಲ್ಲದೆ, ಮನೆಯ ಕಂತಿನ 1 ಲಕ್ಷ ರೂ. ಕೊಡುವ ಭರವಸೆ ನೀಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಶಬಾನಾ ತಾಯಿ ಜನ್ನತಬಿಗೆ ವಿಧವಾ ಮಾಸಾಶನ ಮಂಜೂರಾತಿ ಆದೇಶ ಪತ್ರ ನೀಡಿದರು. ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ ನೀಡುವ 20,000 ರೂ. ಸಹಾಯಧನದ ಅರ್ಜಿಗೆ ಅನುಮೋದನೆ ನೀಡಲಾಯಿತು. ಮಾನಸಿಕ ಅಸ್ವಸ್ಥೆಯಾಗಿರುವ ಶಬಾನಾ ತಾಯಿ ಜನ್ನತಬಿಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಜಿಲ್ಲೆಯಾದ್ಯಂತ ಬುಧವಾರ ನಡೆದ ದ್ವಿತೀಯ ಭಾಷೆ ಪರೀಕ್ಷೆಗೆ 28,615 ವಿದ್ಯಾರ್ಥಿಗಳು ನೋಂದಾಯಿಸಿಕೊ0ಡಿದ್ದರು. 28,150 ಜನ ಹಾಜರಾಗಿ, 465 ಜನ ಗೈರಾಗಿದ್ದರು. ಜಿಲ್ಲೆಯಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ನಡೆದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net