

ಚಾಮರಾಜನಗರ: ಖಾಸಗಿ ಫೈನಾನ್ಸ್‌ಗಳ ಕಿರುಕುಳ ತಾಳಲಾರದೆ ಎರಡು ಕುಟುಂಬಗಳು ಮನೆ ತೊರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದ ನಿವಾಸಿಗಳಾದ ಜ್ಯೋತಿ ಮತ್ತು ಮಹದೇವಮ್ಮ ಎಂಬುವವರು ಫೈನಾನ್ಸ್ ನವರ ಕಿರುಕುಳ ತಾಳಲಾರದೇ ಸುಮಾರು 2 ತಿಂಗಳ ಹಿಂದೆಯೇ ಗ್ರಾಮವನ್ನು ತೊರೆದು ಹೋಗಿದ್ದಾರೆ. ನಿವಾಸಿಗಳ ಮನೆಯ ಮುಂಭಾಗ ಫೈನಾನ್ಸ್‌ನವರು, ಈ ಸ್ವತ್ತು ಫೈನಾನ್ಸ್ ಕಂಪನಿಗೆ ಸೇರಿದೆ ಎಂದು ದಪ್ಪಕ್ಷರಗಳಲ್ಲಿ ಬರೆದಿದ್ದಾರೆ. ಇದರಿಂದಾಗಿ ಅವಮಾನ ತಾಳಲಾರದೆ ರಾತ್ರೋರಾತ್ರಿ ಗ್ರಾಮವನ್ನು ತೊರೆದು ಹೋಗಿದ್ದಾರೆ.
ಈ ಎರಡು ಕುಟುಂಬಗಳಲ್ಲಿ ಪುಟ್ಟ ಮಕ್ಕಳು ಹಾಗೂ ವಿದ್ಯಾಭ್ಯಾಸ ಮಾಡುತ್ತಿದ್ದವರು ಇದ್ದು ಅವರ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಯಾವ ಕುಟುಂಬಗಳು ಎಲ್ಲಿ ಇವೆ ಎನ್ನುವ ಮಾಹಿತಿಯು ತಿಳಿಯುತ್ತಿಲ್ಲ. ಅವರಂತೆ ಗ್ರಾಮದಲ್ಲಿ ಹಲವು ಕುಟುಂಬಗಳು ಫೈನಾನ್ಸ್‌ನವರಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾ ಅವರು ವಿಜಯವಾಣಿ ಜತೆಗೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮನೆಯಲ್ಲಿದ್ದರೂ ಇಲ್ಲದಂತಿದ್ದಾರೆ: ವೆಂಕಟಯ್ಯನಛತ್ರ ಗ್ರಾಮದ ಮತ್ತೊಬ್ಬ ಮಹಿಳೆಯೊಬ್ಬರು ಫೈನಾನ್ಸ್ ಕಾಟವನ್ನು ತಾಳಲಾರದೆ ನೆರೆ ಮನೆಯವರಿಂದ ಮನೆಗೆ ಬೀಗ ಹಾಕಿಸಿ ಒಳಗೆ ಇರುತ್ತಿದ್ದಾರೆ. ಫೈನಾನ್ಸ್‌ನವರು ಬಂದು ಹೋಗುವ ತನಕವೂ ಮನೆಯ ಒಳಗೆಯೇ ಇರುತ್ತಾರೆ. ಫೈನಾನ್ಸ್‌ನವರು ಹೋದಾಗ ಮಾತ್ರ ಹೊರ ಬರುತ್ತಿದ್ದಾರೆ.
ಒಬ್ಬಳೇ ಮಹಿಳೆ ಇರುವುದರಿಂದ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಬಹುದು. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ವೆಂಕಟಯ್ಯನಛತ್ರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಬೇಕಿದೆ. ಮಿತಿ ಮೀರಿರುವ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ಗ್ರಾ.ಪಂ ಸದಸ್ಯೆ ಲೀಲಾ ಅವರು ಒತ್ತಾಯಿಸಿದ್ದಾರೆ.