

ಪಾಂಡವಪುರ: ಖಾಸಗಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೇ ದೊರೆತರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಇದಕ್ಕಾಗಿ ಯೋಜನೆ ರೂಪಿಸಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕ್ಯಾತನಹಳ್ಳಿಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಮಾದರಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿನ ಡೊನೇಷನ್ ಹಾವಳಿಯಿಂದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಹೋಬಳಿಗೊಂದರಂತೆ ಮಾದರಿ ಶಾಲೆ ನಿರ್ಮಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವ ಕೆಲಸ ಮಾಡಲಾಗುವುದು. ಶಾಲೆಗೆ ಅತ್ಯವಿರುವ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಜತೆಗೆ ಶಾಲೆ ಹೆಸರಿನಲ್ಲಿ ಹಣ ಠೇವಣಿ ಇಟ್ಟು ಅತಿಥಿ ಶಿಕ್ಷಕರ ಸಂಬಳ ಮತ್ತು ಶಾಲೆ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ಶಾಲೆಯಲ್ಲಿ ಸಿಗುವ ಸವಲತ್ತುಗಳು ಸರ್ಕಾರಿ ಶಾಲೆಗಳಲ್ಲೇ ದೊರೆತರೆ ಪಾಲಕರು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗುತ್ತಾರೆ. ಅದಕ್ಕಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಮಾದರಿ ಶಾಲೆಯಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಸ್ಪೋರ್ಟ್ಸ್, ಲೈಬ್ರರಿ, ಲ್ಯಾಬ್, ಕಂಪ್ಯೂಟರ್, ಆಟದ ಮೈದಾನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ವ್ಯವಸ್ಥೆ, ಒಳಾಂಗಣ ಕ್ರೀಡಾಂಗಣ ಇತ್ಯಾದಿಗಳನ್ನು ಒಳಗೊಂಡಂತೆ ರಾಜ್ಯಕ್ಕೆ ಮಾದರಿ ಶಾಲೆ ನಿರ್ಮಿಸಲಾಗುವುದು. ಎರಡೆರಡು ತರಗತಿಗಳನ್ನು ತೆರೆಯಲಾಗುವುದು. ಶಾಲೆಯ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಮಕ್ಕಳಿಗೆ ತೊಂದರೆಯಾದಂತೆ ಬಸ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಶಾಲೆಗೆ ಅತ್ಯವಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸ್ಥಳೀಯ ಗ್ರಾಮಸ್ಥರಿಗೆ ಜವಾಬ್ದಾರಿ ನೀಡಲಾಗುವುದು. ಅವರು ಎಸ್‌ಡಿಎಂಸಿ ಸದಸ್ಯರೊಂದಿಗೆ ಸಮನ್ವಯ ಸಾಧಿಸಿಕೊಂಡು ಕೆಲಸ ನಿರ್ವಹಿಸಲಿದ್ದಾರೆ ಎಂದರು.
ಮೇಲುಕೋಟೆ ಕ್ಷೇತ್ರದ ದುದ್ದ, ತಾಲೂಕಿನ ಸುಂಕಾತೊಣ್ಣೂರು, ನಾರಾಯಣಪುರ, ಕ್ಯಾತನಹಳ್ಳಿ ಹಾಗೂ ಪಾಂಡವಪುರ ಪಟ್ಟಣದಲ್ಲಿ ಮಾದರಿ ಶಾಲೆಗಳು ನಿರ್ಮಾಣವಾಲಿದೆ. ಮೊದಲಿಗೆ ಕ್ಯಾತನಹಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಇತರ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಉಳಿದೆಡೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಖಾಸಗಿ ಶಾಲೆಗೆ ತೆರಳುತ್ತಿರುವ ಮಕ್ಕಳ ಪಾಲಕರನ್ನು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲರೂ ಶ್ರಮ ಪಟ್ಟರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚುತ್ತದೆ. ಆಂಗ್ಲ ಮಾಧ್ಯಮ ತೆರೆಯಲು ಪಾಲಕರಿಂದ ಒತ್ತಾಯ ಕೇಳಿ ಬಂದರೆ ಅದಕ್ಕೂ ಕ್ರಮ ವಹಿಸಲಾಗುವುದು ಎಂದರು.
ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಹಣ ದುರ್ಬಳಕೆ ಮತ್ತು ದುರುಪಯೋಗವಾಗಿರುವ ಚಿನ್ನಾಭರಣಗಳ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಂಘದ ಆಡಳಿತ ಮಂಡಳಿ ಮತ್ತು ನೌಕರ ವರ್ಗದವರು ಷೇರುದಾರರು ಗಿರವಿ ಇಟ್ಟಿದ ಚಿನ್ನದಲ್ಲಿ 1 ಕೆಜಿ ಚಿನ್ನವನ್ನು ಹಿಂದಿರುಗಿಸಿದ್ದಾರೆ. ಪ್ರತಿದಿನ ಸಂಘದ ವ್ಯವಹಾರಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ತಾಲೂಕಿನ ಸಹಕಾರ ಸಂಘಗಳಲ್ಲಿ ನಡೆದಿರುವ ಅವ್ಯವಹಾರಳ ಬಗ್ಗೆ ತಿಳಿದುಕೊಳ್ಳಲು ಅ.24ರಂದು ಎಲ್ಲ ಸಹಕಾರ ಸಂಘಗಳ ಸಿಇಒ ಮತ್ತು ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ ಎಂದರು.
ತಾಲೂಕಿನ ಗಿಡದ ಶಂಭೂನಹಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದ ಮಧ್ಯೆದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅರಣ್ಯ ಮಧ್ಯೆದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಹೇಗೆ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಕೇಳಿದ್ದೇನೆ. ಅರಣ್ಯ ಸಚಿವರು ಕೂಡ ವಲಯ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅರಣ್ಯದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಯಲು ಅವಕಾಶ ಕೊಡುವುದಿಲ್ಲ. ತಕ್ಷಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಸವೋದಯ ಕರ್ನಾಟಕ ಪಕ್ಷದ ಎಸ್.ದಯಾನಂದ್, ಚಿಕ್ಕಾಡೆ ಸಿ.ಎನ್.ವಿಜೇಂದ್ರ, ರಾಘವ, ತಹಸೀಲ್ದಾರ್ ಎಸ್.ಸಂತೋಷ್, ಬಿಇಒ ರವಿಕುಮಾರ್ ಇತರರಿದ್ದರು.