

ಮೈಸೂರು: ಆರ್ಥಿಕ ಶಿಸ್ತು ರೂಢಿಸಿಕೊಳ್ಳದೆ ಹೋದರೆ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ನಗರದ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶುಕ್ರವಾರ ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಶಿಸ್ತು ಇಲ್ಲದ ಕಾರಣದಿಂದಲೇ ಬಹುತೇಕರು ಜೀವನದಲ್ಲಿ ಸೋಲು ಅನುಭವಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಆರ್ಥಿಕ ಶಿಕ್ಷಣವನ್ನೂ ಪಡೆಯಬೇಕು. ನಾವು ಸಂಪಾದಿಸಿದ ಹಣವನ್ನು ಯಾವ ರೀತಿ ಹೂಡಿಕೆ ಮಾಡಬೇಕು ಎಂಬ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು 20 ವರ್ಷದ ನಂತರ ಹಣ ಹೂಡಿಕೆಯ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ನಿಮಗೆ ಖುಷಿ ನೀಡುವ ಉದ್ಯೋಗವನ್ನೇ ಆಯ್ದುಕೊಳ್ಳಿ, ಇದಕ್ಕೆ ನೀವು ಕಷ್ಟಪಟ್ಟು ಓದ ಬೇಕು. ನಾನು ಹೃದ್ರೋಗ ತಜ್ಞನಾಗಬೇ ಕೆಂಬ ಕನಸಿನೊಂದಿಗೆ ಓದಿದೆ, ಅದರಲ್ಲಿ ಯಶಸ್ಸು ಕಂಡೆ. ಇದೇ ರೀತಿ ನಿಮ್ಮ ಗುರಿ ಏನು ಎಂಬುದನ್ನು ಈಗಿನಿಂದಲೇ ನಿರ್ಧರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಯಾಗಿ ಮೊಬೈಲ್‌ಅನ್ನು ಬಳಸಬೇಡಿ, ಈ ಸಮಯವನ್ನು ಯಾವುದಾದರು ಪುಸ್ತಕ ಓದಲು ಮೀಸಲಿಡಿ. ಪ್ರತಿದಿನ ನಾಲ್ಕೈದು ಪುಟಗಳನ್ನಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಿ, ಇದು ನಿಮ್ಮ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ. ಸಾಕಷ್ಟು ಜನರು ಉದ್ಯೋಗ ದೊರೆತ ನಂತರ ಓದುವ ಹಾಗೂ ಹೊಸ ವಿಚಾರ ತಿಳಿದುಕೊಳ್ಳುವ ಕಡೆಗೆ ಗಮನ ಹರಿಸುವುದು ಕಡಿಮೆ. ಈ ರೀತಿ ನೀವು ಹೊಸ ಜ್ಞಾನ ಪಡೆಯಲು ಆಸಕ್ತಿ ತೋರದೆ ಹೋದರೆ ಸ್ಪರ್ಧಾತ್ಮಕ ಯುಗದಲ್ಲಿ ಹಿಂದುಳಿಯುವುದು ನಿಶ್ಚಿತ ಎಂದು ಕಿವಿಮಾತು ಹೇಳಿದರು.
ಜೀವನದ ಪ್ರತಿಯೊಂದು ಕ್ಷಣವನ್ನೂ ಸಂಭ್ರಮಿಸಿ. ಜೀವನವನ್ನು ಸಂಭ್ರಮದಿಂದ ಕಳೆಯಲು ನಮಗೆ ಉತ್ತಮ ಆರೋಗ್ಯ ಅವಶ್ಯಕ. ಉತ್ತಮ ಜೀವನಶೈಲಿ ರೂಢಿಸಿಕೊಳ್ಳದ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿದೆ. 25 ರಿಂದ 30 ವರ್ಷದ ವ್ಯಕ್ತಿಗಳು ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪರೀಕ್ಷೆಗಳಲ್ಲಿ ಟಾಪರ್ ಆದವರು ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದೇನು ಇಲ್ಲ. ಕೊನೆಯ ಬೆಂಚಿನವರು ಸಹ ಸಾಕಷ್ಟು ಸಾಧನೆ ಮಾಡಿದ್ದನ್ನು ನಾನು ನೋಡಿದ್ದೇನೆ. ನಾನು ಟಾಪರ್ ಆಗಿಲ್ಲ ಎಂಬ ಕೊರಗು ಬೇಡ, ಛಲ ಮತ್ತು ಗುರಿ ಇದ್ದರೆ ಬದುಕಿನಲ್ಲಿ ಏನನ್ನಾದರು ಸಾಧಿಸಬಹುದು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ ಮಾತನಾಡಿ, ಮರಿಮಲ್ಲಪ್ಪ ಕಾಲೇಜಿಗೆ ಅದ್ಭುತವಾದ ಇತಿಹಾಸವಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಧನೆ ತೋರಿದ್ದಾರೆ. ಈ ಕಾಲೇಜಿನಲ್ಲಿ ಶಿಕ್ಷಣ ಪಡೆಯುವುದು ಪುಣ್ಯ, ಅಷ್ಟೊಂದು ಉತ್ತಮವಾದ ಶಿಕ್ಷಣ ಇಲ್ಲಿ ದೊರೆಯುತ್ತದೆ ಎಂದರು.
ವೇದಿಕೆಯಲ್ಲಿ ಲೇಖಕ ನಿತ್ಯಾನಂದ ವಿವೇಕವಂಶಿ, ಮರಿಮಲ್ಲಪ್ಪನವರ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ, ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ, ಪ್ರಾಂಶುಪಾಲರಾದ ಎಂ.ಎಸ್. ವಿಜಯಾ, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ನಂದೀಶ್ ಕುಮಾರ್, ಸಾಹಿತ್ಯ ವೇದಿಕೆ ಸಂಚಾಲಕ ಎಚ್.ಬಿ. ಆಶಾ, ಕ್ರೀಡಾ ವೇದಿಕೆ ಸಂಚಾಲಕ ಎನ್.ಬಿ. ಪರಶಿವಮೂರ್ತಿ ಇದ್ದರು.