ಆರೋಗ್ಯ ಇಲಾಖೆಗೆ ಆಥಿರ್ಕ ಮುಗ್ಗಟ್ಟು?

HHHH
Published on

ವಿಕ್ರಮ ನಾಡಿಗೇರ ಧಾರವಾಡ
ಸಾರ್ವಜನಿಕರ ಆರೈಕೆಯಲ್ಲಿ ನಿರಂತರವಾಗಿ ತೊಡಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಯೇ ಇದೀಗ ಆಥಿರ್ಕ ಹೊರೆ ಅನುಭವಿಸುವ ಸ್ಥಿತಿ ಉದ್ಭವಿಸಿದೆ. ತಿಂಗಳ ಅಂತ್ಯದಲ್ಲಿ ಸಿಗಬೇಕಾದ ವೇತನ ಎರಡು ತಿಂಗಳಾದರೂ ಸಿಗುತ್ತಿಲ್ಲ.
ಹೌದು! ಇದು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಸ್ಥಿತಿ. ಇದು ಒಂದು ತಿಂಗಳ ಕಥೆಯಲ್ಲ. ವರ್ಷದಲ್ಲಿ ಒಂದೆರಡು ಬಾರಿ ಸರಿಯಾದ ಸಮಯಕ್ಕೆ ವೇತನ ಬಿಡುಗಡೆಯಾದರೆ, ಉಳಿದ ಎಲ್ಲ ತಿಂಗಳಲ್ಲೂ ಇದೇ ಕಥೆ.
ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ವಿವಿಧ ಸ್ಥರಗಳ ಹೆಡ್​ನಲ್ಲಿ ಸೇರಿಸಲಾಗಿದೆ. ಹೀಗೆ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರ್ಸ್​, ಪ್ರಥಮ ದರ್ಜೆ ಸಹಾಯಕರು, ದ್ವೀತಿಯ ದರ್ಜೆ ಸಹಾಯಕರು ಸೇರಿ ಇತರರಿಗೆ ಮಾರ್ಚ್​ನಿಂದ ವೇತನ ಸಿಕ್ಕಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಸಿಬ್ಬಂದಿ ಸೇರಿ ಖಾಯಂ ನೌಕರರಿಗೂ ಈ ಬಿಸಿ ತಟ್ಟಿದೆ.
ಜೀವನಕ್ಕೆ ಸಾಲವೇ ಗತಿ: ಸರಿಯಾದ ಸಮಯಕ್ಕೆ ವೇತನ ದೊರೆಯದ ಕಾರಣ ಇಲಾಖೆಯ ಬಹುತೇಕ ಸಿಬ್ಬಂದಿ ಸಾಲದಲ್ಲೇ ಜೀವನ ಸಾಗಿಸುವಂತಾಗಿದೆ. ಮಕ್ಕಳ ಶಾಲೆ ಶುಲ್ಕ, ಮನೆ ಬಾಡಿಗೆ, ಅಗತ್ಯ ವಸ್ತುಗಳ ಖರೀದಿ, ಇಎಂಐ ಪಾವತಿ ಹೀಗೆ ಖರ್ಚು ಇದ್ದದ್ದೇ. ಕೆಲವರು ಬಡ್ಡಿ ಮೇಲೆ ಹಣ ಪಡೆದರೆ, ಇನ್ನು ಕೆಲವರು ಬಂಗಾರ ಅಡವಿಟ್ಟು ಜೀವನ ಸಾಗಿಸುತ್ತಿದ್ದಾರೆ. 3 ತಿಂಗಳಿಗೊಮ್ಮೆ ಇಲಾಖೆ ನೀಡುವ ವೇತನ ಬಡ್ಡಿ ನೀಡಲೂ ಸಾಕಾಗುತ್ತಿಲ್ಲ. ಹೀಗೆ ಸಾಲದ ಸುಳಿಯಲ್ಲಿ ಸಿಲುಕಿರುವ ಸಿಬ್ಬಂದಿ ಸಾಲ ಮುಕ್ತರಾಗಲು ಸಾಧ್ಯವಾಗುತ್ತಲೇ ಇಲ್ಲ.
ಸರಿಯಾದ ಸಮಯಕ್ಕೆ ವೇತನ ನೀಡಲು ಸಾಧ್ಯವಾಗದ ಆರೋಗ್ಯ ಇಲಾಖೆಗೆ ಆಥಿರ್ಕ ಮುಗ್ಗಟ್ಟು ಎದುರಾಗಿದೆಯೇ ಅಥವಾ ಅಧಿಕಾರಿಗಳು ಸರಿಯಾದ ವೇಳೆಗೆ ವೇತನ ಪಾವತಿ ಮಾಡಲು ನಿರ್ಲಕ್ಷ ವಹಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಮೇಲಧಿಕಾರಿಗಳು ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಂಡು ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವರೇ ಎಂಬುದನ್ನು ಕಾದು ನೋಡಬೇಕು.
ಸಮಯಕ್ಕೆ ಸರಿಯಾಗಿ ವೇತನವಿಲ್ಲ: ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಇದರಿಂದ ತಿಂಗಳ ಮನೆ ಖರ್ಚು ಸರಿದೂಗಿಸುವುದು ತಲೆನೋವಾಗಿದೆ. ಬಜೆಟ್​ ಬಂದಿಲ್ಲ ಎಂದು ಹೇಳುತ್ತಾರೆ. ಪದೇ ಪದೇ ಈ ರೀತಿ ಆಗುತ್ತಿರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ ಮೇಲಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಿಬ್ಬಂದಿ ವೇತನಕ್ಕೆ ಇಂತಿಷ್ಟು ಹಣವನ್ನು ಬಜೆಟ್​ನಲ್ಲಿ ಮೀಸಲಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸಿಬ್ಬಂದಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಅನುದಾನ ಬಂದಿಲ್ಲರಾಜ್ಯ ಸರ್ಕಾರದಿಂದ ಅನುದಾನ ಬರದ ಕಾರಣಕ್ಕೆ 2&3 ಹೆಡ್​ನ ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗಿಲ್ಲ. ಉಳಿದಂತೆ ಎಲ್ಲರ ವೇತನ ಪಾವತಿಯಾಗಿದೆ. ಅನುದಾನ ಬಂದ ತಕ್ಷಣ ವೇತನ ಪಾವತಿಗೆ ಕ್ರಮ ವಹಿಸಲಾಗುವುದು.ಡಾ. ಶಶಿ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net