

ಕೋಲಾರ : ಸುಲಭವಾಗಿ ಸಾಲ ಸಿಗುತ್ತದೆಂಬ ಆಸೆಯಿಂದ ಅವ್ಯಶ್ಯಕತೆಗೆ ಮೀರಿ ಸಾಲ ಪಡೆಯುವುದು ಆರ್ಥಿಕ ಹೊರೆಯನ್ನುಂಟು ಮಾಡುವುದಲ್ಲದೇ ಜೀವನಕ್ಕೂ ಕುತ್ತು ತರಬಹುದು. ಹಾಗಾಗಿ ನಾಗರಿಕರು ವಿವೇಚನೆಯಿಂದ ಸಾಲ ಪಡೆದು, ನಿಗದಿತ ಅವಧಿಯೊಳಗೆ ಕಂತು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಚ್ಚರಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯ ಎಲ್ಲ ಖಾಸಗಿ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಗಳ ಖಾತೆದಾರರ ಹಾಗೂ ಸಾಲಗಾರರ ವಿವರಗಳನ್ನು ಕೂಡಲೇ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಬೇಕು. ಹಣಕಾಸು ಚಟುವಟಿಕೆಗಳು ನ್ಯಾಯಯುತವಾಗಿದ್ದಲ್ಲಿ ಸರ್ಕಾರವು ಯಾವುದೇ ವ್ಯವಹಾರ ನಡೆಸಲು ಅಡ್ಡಿ ಪಡಿಸುವುದಿಲ್ಲ. ಹಣಕಾಸು ಸಂಸ್ಥೆಗಳು ಜವಾಬ್ದಾರಿ ಅರಿತು ಕಾರ್ಯವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಜನರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಂದರ್ಭ ಉದ್ಭವಿಸಬಾರದು. ಹಣಕಾಸಿನ ವ್ಯಹಾರಗಳಲ್ಲಿ ಪಾರದರ್ಶಕತೆ ಇರಬೇಕು. ಸಾರ್ವಜನಿಕರು ಸಹ ಕೊಳ್ಳುಬಾಕ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕಿಶೋರ್, ಸಹಾಯಕ ನಿಬಂಧಕ ನವೀನ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಸುಬ್ಬಾನಾಯಕ್, ಶೀಲಾ, ಲೀಡ್ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ನೋಂದಣಿ ಆಗಿರುವ ಮತ್ತು ಆಗದಿರುವ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಕಿರುಕುಳ ನೀಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಗಿರವಿದಾರರೂ ಸಹ ಇತ್ತೀಚೆಗೆ ಸಾಲ ನೀಡುತ್ತಿದ್ದು, ಈ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಹೋಗುವಾಗ ಕಾನೂನು ಬದ್ಧವಾಗಿ, ಜಪ್ತಿಗಾಗಿ ಮೊದಲು ನೋಟಿಸ್ ನೀಡಿ ಆ ನಂತರ ಕ್ರಮ ಕೈಗೊಳ್ಳಬೇಕು. ಏಕಾಏಕಿ ಜಪ್ತಿ ಮಾಡಿದರೆ ಪೊಲೀಸ್ ಇಲಾಖೆ ಅಂತಹವರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಳ್ಳುತ್ತದೆ ಎಂದರು.
ಕಿರುಕುಳ ನೀಡಿದರೆ ದೂರು ದಾಖಲು :ಸಾಲ ವಸೂಲಾತಿ ಪದ್ಧತಿಗಳನ್ನು ಆರ್ಬಿಐ ನಿರ್ದೇಶನದ ಮೇರೆಗೆ ಅಳವಡಿಸಿಕೊಳ್ಳಬೇಕು. ಮನಬಂದಂತೆ ವಸೂಲಿಗೆ ಹೋಗುವಂತಿಲ್ಲ. ಕಚೇರಿ ವೇಳೆಯಲ್ಲಿ ಮಾತ್ರ ಸಾಲಗಾರರಿಗೆ ದೂರವಾಣಿ ಕರೆ ಮಾಡಿ ಸಾಲ ವಸೂಲಾತಿಗೆ ಹೋಗಬಹುದಾಗಿದೆ. ಅಕ್ರಮವಾಗಿ ಹಾಗೂ ಕಾನೂನು ವಿರುದ್ಧವಾಗಿ ಸಾಲ ವಸೂಲಿಗೆ ಇಳಿದು ಕಿರುಕುಳ ನೀಡುವ ಮೈಕ್ರೋ ೈನಾನ್ಸ್ಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಲಾಗುವುದು. ಈ ರೀತಿ ಯಾವುದೇ ಸಂಸ್ಥೆ ಕಿರುಕುಳ ನೀಡಿದಲ್ಲಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ದೂರು ಸಹ ದಾಖಲಿಸಬಹುದಾಗಿದೆ. ಜನರು ದೂರು ನೀಡಿದ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ. ಸಾಲ ವಸೂಲಾತಿಗೆ ಕೆಲ ಸಂಸ್ಥೆಗಳು ಬೆದರಿಕೆ ತಂತ್ರ ರೂಢಿಸಿಕೊಂಡಿರುವ ಆರೋಪ ಇದ್ದು, ಇದನ್ನು ಸಹಿಸಲಾಗುವುದಿಲ್ಲ. ಸಾಲ ನೀಡುವಾಗ ಪಾರದರ್ಶಕತೆಯಿಂದ ಎಲ್ಲ ಕಾನೂನುಗಳನ್ನು ಸಾಲಗಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಕಾನೂನುಬದ್ಧವಲ್ಲದ ವಸೂಲಾತಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಡಿಸಿ ಎಚ್ಚರಿಸಿದರು.ವಸೂಲಿಗಾರರ ಹಿನ್ನೆಲೆ ಪರಿಶೀಲಿಸಿ: ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿ ತಂಡದಲ್ಲಿ ಕಾರ್ಯನಿರ್ವಹಿಸುವವರ ವೈಯಕ್ತಿಕ ವಿವರಗಳನ್ನು ಪೊಲೀಸ್ ಇಲಾಖೆಯಲ್ಲಿ ಪರಿಶೀಲಿಸಿಕೊಳ್ಳಬೇಕು. ಸಂಸ್ಥೆಯು ಸಹ ಮುನ್ನೆಚ್ಚರಿಕೆಯಾಗಿ ಅವರ ವಿವರಗಳನ್ನು ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ನೇಮಕ ಮಾಡಿದ ನಂತರ ಅವರಿಗೆ ಸೂಕ್ತ ತರಬೇತಿ ನೀಡಿ ಸಲಹೆ ಸೂಚನೆಗಳನ್ನು ಒದಗಿಸಬೇಕು. ಬಳಿಕ ಸಾಲ ವಸೂಲಾತಿಗೆ ಕಳುಹಿಸಬೇಕು ಎಂದರು.
ಆರ್ಬಿಐ ನಿರ್ದೇಶನ ಪಾಲನೆ ಕಡ್ಡಾಯ: ಸಂಸ್ಥೆಗಳು ಹಣಕಾಸು ವ್ಯವಹಾರ ಮಾಡುವಾಗ ಆರ್ಬಿಐ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು. ವ್ಯಕ್ತಿಯ ಸಾಲ ಪಡೆಯುವ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಸಾಲ ನೀಡಬಾರದು. ಒಬ್ಬನೇ ವ್ಯಕ್ತಿ ಬೇರೆಬೇರೆ ಸಂಸ್ಥೆಗಳಲ್ಲಿ ಸಾಲ ಪಡೆಯುವುದು ರೂಢಿಯಲ್ಲಿದೆ. ಇದನ್ನು ಹಣಕಾಸು ಸಂಸ್ಥೆಗಳ ಆಂತರಿಕ ಸಮನ್ವಯತೆಯಿಂದ ಕಟ್ಟುನಿಟ್ಟಾಗಿ ಪರಿಶೀಲಿಸಿ ಸಾಲ ಮಂಜೂರು ಮಾಡುವ ಬಗ್ಗೆ ಚಿಂತಿಸಬೇಕು. ಆರ್ಬಿಐನ ನಿರ್ದೇಶನದಂತೆ ಮೂರು ಸಂಸ್ಥೆಗಳಲ್ಲಿ ಏಕಕಾಲಕ್ಕೆ ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಈ ನಿಮಯ ಮೀರಬಾರದು ಎಂದರು.