

ಕಿಕ್ಕೇರಿ: ದೇಗುಲ, ಆಧ್ಯಾತ್ಮಿಕ ಕೇಂದ್ರಗಳು ನೆಮ್ಮದಿಯ ತಾಣವಾಗಿದ್ದು, ಇವುಗಳನ್ನು ಜೋಪಾನ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.
ಹೋಬಳಿಯ ಸಿದ್ದಾಪುರ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ದೇಗುಲ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 1ಲಕ್ಷ ರೂ. ಸಹಾಯಧನದ ಚೆಕ್ ಅನ್ನು ಬುಧವಾರ ದೇಗುಲ ಟ್ರಸ್ಟಿಗಳಿಗೆ ವಿತರಿಸಿ ಮಾತನಾಡಿ, ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಸೇವಾ ಕೈಂಕರ್ಯ ಎಲ್ಲರಿಗೂ ಒಳಿತು ಮಾಡಲಿದೆ. ದೇಗುಲಗಳು ಗ್ರಾಮದ ಶಾಂತಿ, ನೆಮ್ಮದಿಗೆ ಸಹಕಾರಿಯಾಗಿ ಎಲ್ಲರನ್ನೂ ಒಗ್ಗೂಡಿಸುವ ತಾಣವಾಗಿದೆ ಎಂದರು.
ಸಂಸ್ಥೆಯು ಗ್ರಾಮ, ವೈಯಕ್ತಿಕ ಅಭಿವೃದ್ಧಿಗಾಗಿ ಪ್ರಗತಿಬಂಧು, ಜ್ಞಾನವಿಕಾಸ, ಸ್ವ-ಸಹಾಯ ಸಂಘಗಳನ್ನು ತೆರೆದಿದೆ. ಸಂಸ್ಥೆ ಇರುವುದು ಸರ್ವರ ಸಬಲೀಕರಣಕ್ಕಾಗಿ. ಸಂಸ್ಥೆ ಯಾವುದೇ ರೀತಿ ಆರ್ಥಿಕ ವ್ಯವಹಾರ ನೆಪದಲ್ಲಿ ಕಿರುಕುಳ ನೀಡುತ್ತಿಲ್ಲ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ ಮಾತನಾಡಿ, ಗ್ರಾಮದ ಅಭಿವೃದ್ಧಿ, ಕೆರೆಕಟ್ಟೆ ಉಳಿಸಲು ಅಭಿಯಾನವನ್ನು ಪೂಜ್ಯರು ಹಮ್ಮಿಕೊಂಡಿದ್ದಾರೆ. ಗ್ರಾಮ ಸ್ವಚ್ಛತೆ, ದೇಗುಲ ನೈರ್ಮಲ್ಯೀಕರಣಕ್ಕೆ ಸಹಕರಿಸಿ. ಹೈನುಗಾರಿಕೆ, ಕೆರೆ ಕಟ್ಟೆ ಅಭಿವೃದ್ಧಿಗೆ, ಗುಡಿ ಕೈಗಾರಿಕೆಗೆ ಯುವಕರು ಮುಂದಾಗಬೇಕು. ಸಂಸ್ಥೆ ಹಲವು ತರಬೇತಿಗಳನ್ನು ನೀಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸ್ಥೆ ಮೇಲ್ವಿಚಾರಕಿ ಮಾದಲಾಂಬಿಕಾ, ಸೇವಾ ಪ್ರತಿನಿಧಿ ಮಂಜುಳಾ, ಲಕ್ಷ್ಮೀ, ಗ್ರಾಮದ ಮುಖಂಡರು, ದೇಗುಲ ಸಮಿತಿ ಸದಸ್ಯರು ಭಾಗವಹಿಸಿದ್ದರು.