

ಕೆ.ಆರ್.ಪೇಟೆ: ಬೆಂಕಿ ತಗುಲಿ ಮನೆಯೊಂದು ಸುಟ್ಟ ಕರಕಲಾಗಿದ್ದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಇತ್ತೀಚೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಮಾರೇನಹಳ್ಳಿ ಗ್ರಾಮದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣ ಭಸ್ಮವಾಗಿತ್ತು. ಮಾರೇನಹಳ್ಳಿ ಗ್ರಾಮದ ಶಾರದಮ್ಮ ಮೂರ್ತಿ ದಂಪತಿ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಶಾಸಕರು ಭೇಟಿ ನೀಡಿ, ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಸರ್ಕಾರದಿಂದ ಸಿಗುವ ಎಲ್ಲ ರೀತಿಯ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮನೆಯಿಂದ ಹೊರಗಡೆ ಹೋಗುವಾಗ ಗ್ಯಾಸ್, ವಿದ್ಯುತ್ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ತುಂಬ ಅಗತ್ಯ. ಇಲ್ಲದಿದ್ದರೆ ಇಂತಹ ಅವಘಡಗಳಿಂದ ಕುಟುಂಬ ನಷ್ಟಕ್ಕೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿರಾಮ್, ತಾಪಂ ಮಾಜಿ ಸದಸ್ಯ ಹೆಳವೇಗೌಡ, ಬೇಲದಕೆರೆ ನಂಜಪ್ಪ, ಅಧಿಕಾರಿಗಳು ಇದ್ದರು.