ಕಾಡು ಕೋಣ ತಿವಿದು ಗಾಯಗೊಂಡಿದ್ದ ವೃದ್ಧನಿಗೆ ಆರ್ಥಿಕ ನೆರವು

bafffa
ಮುಜೆಕಾನು ಗ್ರಾಮದ ಮರಿಗೌಡ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಒಂದು ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ, ನಿಶ್ಚಿತ್, ಕೆ.ಆರ್.ಪ್ರಭಾಕರ್, ಸುಜಿತ್, ಮಂಜುನಾಥ್ ಇತರರಿದ್ದರು.
Published on

ಕಳಸ: ಕಾಡುಕೋಣ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಜೆಕಾನ್ ಮರಿಗೌಡ ಅವರಿಗೆ ಅರಣ್ಯ ಇಲಾಖೆ, ಊರಿನ ಜನರು ಆರ್ಥಿಕ ನೆರವು ನೀಡಿದ್ದಾರೆ.

ಆ.26ರಂದು ಮರಿಗೌಡ ಕಳಸಕ್ಕೆ ಬರುತ್ತಿದ್ದಾಗ ಎದೆಗೆ ಕಾಡುಕೋಣ ತಿವಿದಿತ್ತು. ಶ್ವಾಸಕೋಶದಲ್ಲಿ ಮೂರು ರಂಧ್ರಗಳಾಗಿದ್ದವು. ಎದೆಯ ಮೂಳೆಗಳು ಮುರಿದಿದ್ದವು. ಚಿಕಿತ್ಸೆಗೆ 3 ಲಕ್ಷ ರೂಪಾಯಿ ಖರ್ಚು ತಗುಲಬಹುದು ಎಂದು ಕುಟುಂಬಸ್ಥರು ಅಂದಾಜಿಸಿದ್ದರು.
ಪರಿಶಿಷ್ಟ ವರ್ಗದ ಗೌಡಲು ಸಮುದಾಯದ ಮರಿಗೌಡ ಸಣ್ಣ ಕೃಷಿಕ. ಸ್ವಲ್ಪ ಗದ್ದೆ ಮತ್ತು ಅರಣ್ಯ ಹಕ್ಕು ಕಾಯ್ದೆಯ ತೋಟದಲ್ಲಿ ಕೃಷಿ ಮಾಡುತ್ತಿದ್ದ ಮರಿಗೌಡ ಅವರಿಗೆ ಪತ್ನಿ ಇದ್ದಾರೆ. ಆದರೆ ದಂಪತಿಗೆ ಮಕ್ಕಳು ಇಲ್ಲದೆ ಅಕ್ಕಪಕ್ಕದ ಮನೆಯವರೇ ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡುತ್ತಿದ್ದರು. ಮರಿಗೌಡ ಅವರ ಚಿಕಿತ್ಸೆಗೆ ಅರಣ್ಯ ಇಲಾಖೆ 1 ಲಕ್ಷ ರೂ. ನೀಡಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ 20 ಸಾವಿರ ರೂ. ನೆರವು ನೀಡಿದ್ದರು. ಸಾರ್ವಜನಿಕರು ಸೇರಿ ಸುಮಾರು ಒಂದು ಲಕ್ಷ ರೂ.ನೆರವು ನೀಡಿ ಚಿಕಿತ್ಸೆಗೆ ನೆರವಾಗಿದ್ದಾರೆ. ಮರಿಗೌಡ ಅವರಿಗೆ ಶಸಚಿಕಿತ್ಸೆ ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಣ್ಯ ಇಲಾಖೆ ಚೆಕ್ ನೀಡುವ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ, ವಲಯ ಅರಣ್ಯಾಧಿಕಾರಿ ನಿಶ್ಚಿತ್, ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ಶ್ರೇಣಿಕ್, ಮಹಮ್ಮದ್ ರಫೀಕ್, ವೀರೇಂದ್ರ, ಸುಜಿತ್, ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net