ವಿಮೆಯಿಂದ ಆರ್ಥಿಕ ನೆರವು

FotoJet 24 1
Published on

ಶಿರಾ:ರಾಸುಗಳ ವಿಮಾ ಯೋಜನೆಯಿಂದ ಬರುವ ಪರಿಹಾರದ ಮೊತ್ತ ನಿಮ್ಮ ಆರ್ಥಿಕತೆಗೆ ನೇರವಾಗುವುದರ ತೆಗೆ ಮತ್ತೊಂದು ರಾಸು ಖರೀದಿಸಲು ಸಹಕಾರಿಯಾಗಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.

ತಾಲೂಕಿನ ಕಳ್ಳಂಬೆಳ್ಳ ಡೇರಿಯಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಸಾಲಿನ ಗುಂಪು ರಾಸು ವಿಮಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಷ್ಟಪಟ್ಟು ಸಂಪಾದಿಸಿದ ಹಣದಿಂದ ರಾಸುಗಳನ್ನು ಖರೀದಿಸಿ, ಹೈನುಗಾರಿಕೆ ನಂಬಿ ಎಷ್ಟೋ ಕುಟುಂಬಗಳು ಜೀವನ ನಡೆಸುತ್ತಿವೆ. ತಮ್ಮ ರಾಸುಗಳು ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ವಿಮಾ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸದರು.

ತಾಲೂಕಿನ ಎಲ್ಲ ಹಾಲು ಉತ್ಪಾದಕರು ವಿಮಾ ಯೋಜನೆಯ ಕಂತಿನ ಹಣವನ್ನು ಸಂಪೂರ್ಣವಾಗಿ ಭರಿಸಲು ಕಷ್ಟ ಸಾಧ್ಯ. ಇದನ್ನು ಅರಿತ ತುಮುಲ್ ಆಡಳಿತ ಮಂಡಳಿ ಶೇ.40 ವಿಮಾ ಮೊತ್ತವನ್ನು ಮಂಡಳಿಯಿಂದ, 20ರಷ್ಟು ಕಲ್ಯಾಣ ಟ್ರಸ್ಟ್ ನಿಧಿಯಿಂದ ಭರಿಸಿ ಉಳಿದ ಶೇ.40 ವಿಮಾ ಕಂತಿನ ಹಣವನ್ನು ಮಾತ್ರ ಉತ್ಪಾದಕರ ಖಾತೆಯಿಂದ ಭರಿಸಲಾಗುವುದು. ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ತಪ್ಪುತ್ತದೆ. ವೈದ್ಯಾಧಿಕಾರಿಗಳು ರಾಸುಗಳ ವಯಸ್ಸು, ಹಾಗೂ ಇನ್ನಿತರ ಮಾನದಂಡಗಳ ತೆಗೆ ವಿಮಾ ಮೊತ್ತವನ್ನ ನಿರ್ಧರಿಸಲಿದ್ದಾರೆ. ಈ ಅವಕಾಶವನ್ನು ತಾಲೂಕಿನ ಹೈನುಗಾರಿಕೆ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಿರಾ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವಿಸ್ತರಣಾಧಿಕಾರಿ ಚೈತ್ರಾ ಮಾತನಾಡಿ, ಈ ಹಿಂದೆ ರಾಸುಗಳ ವಿಮಾ ಪರಿಹಾರದ ಮೊತ್ತ ಬಹಳ ಕಡಿಮೆ ಇತ್ತು. ಇದನ್ನು ಅರಿತ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಅವರು ಆಡಳಿತ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿ ಸೆ.30ರಿಂದ 40 ಸಾವಿರ ಇದ್ದ ವಿಮಾ ಪರಿಹಾರದ ಮೊತ್ತವನ್ನು 70 ಸಾವಿರಕ್ಕೆ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ ಎಂದರು.

ಪಶು ವೈದ್ಯಾಧಿಕಾರಿ ಡಾ.ಶ್ರೀಕಾಂತ್, ಡಾ.ಇಕ್ಲಾಸ್, ಬಾಬಾ ಫಕ್ರುದ್ದೀನ್, ಪಿ.ಎಂ.ಪ್ರವೀಣ್, ಕಳ್ಳಂಬೆಳ್ಳ ಡೇರಿ ಅಧ್ಯಕ್ಷ ಕಾಂತರಾಜು, ಉಪಾಧ್ಯಕ್ಷೆ ನರಸಮ್ಮ, ಕಾರ್ಯದರ್ಶಿ ನೇತ್ರಾವತಿ, ನಿರ್ದೇಶಕರು, ಸದಸ್ಯರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net