ಐವರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

Financial aid is five for five students
ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಚೆಕ್​ ನೀಡಿದರು. ಡಾ. ಆರ್​.ವಿ. ಕುಲಕರ್ಣಿ, ಎಸ್​.ಎ. ಬಿರಾದಾರ (ಕನ್ನಾಳ) ಮತ್ತಿತರರಿದ್ದಾರೆ.
Published on

ವಿಜಯಪುರ: ನೀಟ್​ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್​ ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಪ್ರತಿಭಾವಂತ ಐವರು ವಿದ್ಯಾರ್ಥಿಗಳಿಗೆ ಕೋರ್ಸಿಗೆ ಅಗತ್ಯವಿದ್ದ ಸಂಪೂರ್ಣ ಆರ್ಥಿಕ ನೆರವು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.

ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ತಿಕೋಟಾ ತಾಲೂಕಿನ ಬಾಬಾನಗರದ ವಿಶಾಲ ಕೋರೆಗಾಂವ, ಅರಕೇರಿಯ ಕರಣ ಸಿಂಧೆ ಮತ್ತು ಯಶವಂತ ಮೋಹಿತೆ, ಕಾರಜೋಳ ತಾಂಡಾದ ಅಜೀತ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಠ ಅವರಿಗೆ ಸಚಿವರು ಎಂಬಿಬಿಎಸ್​ ಕೋರ್ಸ್​ನ ಮೊದಲ ವರ್ಷದ ಕಂತಿನ ಬೋಧನೆ, ಹಾಸ್ಟೆಲ್​ ಮತ್ತು ಊಟದ ಶುಲ್ಕಕ್ಕೆ ಅಗತ್ಯವಿದ್ದ ಹಣದ ಚೆಕ್​ಗಳನ್ನು ವಿತರಿಸಿದರು.

ವಿದ್ಯಾರ್ಥಿಗಳ ಪಾಲಕರು ಮಾತನಾಡಿ, ಬಡವರಾದ ನಮಗೆ ಮಕ್ಕಳ ಭವಿಷ್ಯ ಬಗ್ಗೆ ಚಿಂತೆ ಉಂಟಾಗಿತ್ತು. ನೀಟ್​ ಪರೀೆಯಲ್ಲಿ ಉತ್ತಮ ಅಂಕ ಪಡೆದು ಎಂಬಿಬಿಎಸ್​ ಸೀಟು ಪಡೆದರೂ ಹಣವಿಲ್ಲದ ಕಾರಣ ಸಂಕಷ್ಟದಲ್ಲಿದ್ದೇವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಚಿವ ಎಂ.ಬಿ. ಪಾಟೀಲರು ನಮ್ಮ ಪಾಲಿಗೆ ದೇವರ ರೂಪದಲ್ಲಿ ಬಂದು ಆರ್ಥಿಕ ನೆರವು ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅಲ್ಲದೆ, ನಮ್ಮ ಮಕ್ಕಳು ವೈದ್ಯರಾಗಬೇಕು ಎಂಬ ಕನಸು ನನಸಾಗಲು ಕಾರಣರಾಗಿದ್ದಾರೆ. ಅವರಿಗೆ ಸದಾ ಋಣಿಯಾಗಿರುತ್ತೇವೆ ಎಂದರು.

ಬಿಎಲ್​ಡಿಇ ಸಂಸ್ಥೆ ಮುಖ್ಯ ಸಲಹೆಗಾರ ಹಾಗೂ ಡೀಮ್ಡ್​ ವಿವಿ ರಿಜಿಸ್ಟ್ರಾರ್​ ಡಾ. ಆರ್​.ವಿ. ಕುಲಕರ್ಣಿ, ಸಂಸ್ಥೆ ಆಡಳಿತ ಕಚೇರಿ ಅಧೀಕ ಎಸ್​.ಎ. ಬಿರಾದಾರ (ಕನ್ನಾಳ) ಮತ್ತಿತರರಿದ್ದರು.

ಬಾಬಾನಗರದ ವಿದ್ಯಾರ್ಥಿ ವಿಶಾಲ ಕೋರೆಗಾಂವಗೆ ಮೊದಲ ಕಂತಿನ 1,54,600 ರೂ., ಅರಕೇರಿಯ ವಿದ್ಯಾರ್ಥಿ ಕರಣ ಸಿಂಧೆಗೆ 1,91, 250 ರೂ., ಅದೇ ಗ್ರಾಮದ ಯಶವಂತ ಮೋಹಿತೆ 3,09,321 ರೂ., ಬಬಲೇಶ್ವರ ತಾಲೂಕಿನ ಕಾರಜೋಳ ತಾಂಡಾದ ಅಜೀತ ರಾಠೋಡಗೆ 1,35,000 ರೂ. ಮತ್ತು ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ರಾಜಶ್ರೀ ಮಠ ಅವರಿಗೆ 1,56, 815 ರೂ. ಚೆಕ್​ನ್ನು ಹಸ್ತಾಂತರಿಸಿದ ಸಚಿವರು, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಪಾಲಕರು, ಊರು, ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರುವ ಜತೆಗೆ ವೈದ್ಯರಾದ ನಂತರ ಉತ್ತಮ ಸೇವೆ ಸಲ್ಲಿಸುವಂತೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net