

ವಿರಾಜಪೇಟೆ : ವಿರಾಜಪೇಟೆ ಕೊಡವ ಸೌಹಾರ್ಧ ಕ್ರೇಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಸಂಸ್ಥೆಯ ಮಹಾಸಭೆ ಪಟ್ಟಣ ಸಹಕಾರ ಬ್ಯಾಂಕ್‌ನ ಸಭಾಂಗಣದಲ್ಲಿ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಸಂಸ್ಥೆ ಪ್ರಾರಂಭಗೊಂಡು ಐದು ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು, ಸದಸ್ಯರು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿರುವುದರಿಂದ ಆರ್ಥಿಕ ವ್ಯವಹಾರಗಳು ಪ್ರಗತಿಯಲ್ಲಿ ಸಾಗಿಸುತ್ತಿದೆ ಎಂದು ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.
ಈ ಸಂಸ್ಥೆಯು ವಿರಾಜಪೇಟೆ, ಮಡಿಕೇರಿ ಪೊನ್ನಂಪೇಟೆ ಮೂರು ತಾಲೂಕುಗಳನ್ನು ಒಳಗೊಂಡಿದೆ. 1310 ಸದಸ್ಯರುಗಳನ್ನು ಹೊಂದಿದೆ. ಪಾಲು ಬಂಡವಾಳ 80.10 ಲಕ್ಷ ರೂ.ಗಳಾಗಿದ್ದು ವಿವಿಧ ಠೇವಣಿಗಳಿಂದ
6.31 ಕೋಟಿ ರೂ. ಸಂಗ್ರಹ ಆಗಿದೆ. 4.66 ಕೋಟಿ ರೂ. ವಿವಿಧ ಬಗೆಯ ಸಾಲ, ಸೌಲಭ್ಯಗಳನ್ನು ನೀಡಲಾಗಿದೆ. ಶೇ. 99.25 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ ಎಂದರು.
ಇತರೆ ಬ್ಯಾಂಕಿನಲ್ಲಿ ಠೇವಣಿಯಾಗಿ 2.40 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ 17,83,764 ಲಕ್ಷ ರೂ. ಲಾಭ ಗಳಿಸಿದೆ. ಲಾಭಾಂಶವನ್ನು ಸಹಕಾರಿಗಳ ನಿಯಮಾನುಸಾರ ವಿಲೇವಾರಿ ಮಾಡಲಾಗುವುದು. 2023-24 ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ 10 ರಷ್ಟು ಡಿವಿಡೆಂಟ್ ಹಂಚಲು ಕ್ರಮ ವಹಿಸಲಾಗಿದೆ. ಈ ಸಾಲಿನಿಂದ ಎಲ್ಲ ರೀತಿಯ ಸಾಲಗಳಿಗೆ ವಿಮಾ ಕಂಪನಿಯಿಂದ ಭದ್ರತೆ ಒದಗಿಸಲಾಗುವುದು ಎಂದರು.
ಸಂಸ್ಥೆಯು ಸಂಪೂರ್ಣ ಗಣಕೀಕೃತವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸೆಟ್ ಲಾಕರ್, ಕ್ಯಾಶ್‌ಲೆಸ್ ಸೇವೆಗಳಾದ ಆರ್.ಟಿ.ಜಿ.ಎಸ್, ಮೊಬೈಲ್ ಬ್ಯಾಂಕಿಂಗ್ ಮತ್ತು ಇ-ಸ್ಟಾಂಪಿಂಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ಈಗಾಗಲೇ ಒಂದು ಶಾಖೆಯನ್ನು ಅಮ್ಮತ್ತಿಯಲ್ಲಿ ಪ್ರಾರಂಭಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಮಟ್ಟ ನಷ್ಟದಲ್ಲಿದ್ದು ಸಹಕಾರಿಗಳ ಸಹಕಾರದಿಂದ ಮುಂದಿನ ಸಾಲಿನಲ್ಲಿ ಲಾಭ ಗಳಿಸುವ ಭರವಸೆ ಇದೆ ಎಂದು ಹೇಳಿದರು.
ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಉತ್ತಮವಾಗಿದ್ದು, ಮುಂದಿನ ತಿಂಗಳಲ್ಲಿ ಚುನಾವಣೆ ಇರುವುದರಿಂದ ದುಂದು ವೆಚ್ಚ ಮಾಡದೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸಲಹೆ ನೀಡಿದರು. ಇವರ ಸಲಹೆಗೆ ಕೋಲತಂಡ ಸುಬ್ರಮಣಿ ಹಾಗೂ ಪಟ್ಟದ ಪೂವಣ್ಣ ಧ್ವನಿ ಗೂಡಿಸಿದರು.
ಸೌಹಾರ್ಧ ಡೆವಲಪ್‌ಮೆಂಟ್ ಜಿಲ್ಲಾ ಅಧಿಕಾರಿ ಸುರೇಶ್ ಮಾತನಾಡಿ, ರಾಜ್ಯಾದ್ಯಂತ ಸೌಹಾರ್ಧ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲೂ ವಿರಾಜಪೇಟೆ ಸೌಹಾರ್ಧ ಸಂಸ್ಥೆ ಸಹಕಾರಿಗಳ ವ್ಯವಹಾರಗಳಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂಘದ ಪ್ರಗತಿಗೆ ಕಾರಣವಾಗಿದೆ. ಸಹಕಾರಿಗಳು ಕೂಡ ಸಂಸ್ಥೆಯ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಸಲಹೆ ನೀಡಿದರು.
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಹಾಗೂ ಸಂಸ್ಥೆಯ ಪಿಗ್ಮಿ ಏಜೆಂಟರುಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಚೇಂದಂಡ ವಸಂತ್‌ಕುಮಾರ್, ನಿರ್ದೇಶಕರಾದ ಕಾಂಡಂಡ ಎಂ.ಚರ್ಮಣ, ನೆಲ್ಲಚಂಡ. ಎಂ.ಭೀಮಯ್ಯ, ವಾಂಚಿರ ಟಿ.ನಾಣಯ್ಯ, ಚೇಂದ್ರಿಮಡ ಕೆ.ನಂಜಪ್ಪ, ಕೇಳಪಂಡ ಎನ್.ವಿಶ್ವನಾಥ್, ಕೊಂಗಂಡ.ಎ.ನಾಣಯ್ಯ, ಕಾಳೇಂಗಡ ಬಿ.ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ವಿ.ದಿವ್ಯಾ, ನೆಲ್ಲಮಕ್ಕಡ ಸಿ.ಬೆಳ್ಯಪ್ಪ, ಬೊಳ್ಳೆಪಂಡ ಎಂ ಸುರೇಶ್, ಐನಂಡ ಪಿ.ಗಣಪತಿ, ಪಟ್ಟಡ ಸಿ.ಟೀನಾ ಇದ್ದರು.