ಕೊನೆಗೂ ಶಾಸಕ ಅನಿಲ್ ಚಿಕ್ಕಮಾದುಗೆ ಜಯ

PHOTO-2025-09-09-16-30-06
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಜಯಗಳಿಸಿ ಮನೆಗೆ ಬಂದ ಅನಿಲ ಚಿಕ್ಕಮಾದು ಅವರನ್ನು ತಾಯಿ ನಾಗಮ್ಮ, ಪತ್ನಿ ಸೌಮ್ಯಾ ಆರತಿ ಎತ್ತಿ ಶುಭಾಶಯ ಕೋರಿದರು.
Published on

ಎಚ್.ಡಿ.ಕೋಟೆ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ)ನ ಎಚ್.ಡಿ.ಕೋಟೆ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಸಕ ಅನಿಲ್ ಚಿಕ್ಕಮಾದು ಜಯ ಗಳಿಸಿದ್ದಾರೆ.

2 ತಿಂಗಳ ಹಿಂದೆ ನಡೆದ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಶಾಸಕ ಅನಿಲ್ ಚಿಕ್ಕಮಾದು ಮತ್ತು ಗುಂಡತ್ತೂರು ಪ್ರಕಾಶ್ ಸ್ಪರ್ಧಿಸಿದ್ದರು. 17 ಮತದಾರರು ಮತ ಚಲಾಯಿಸಿದ್ದರು. ಇದರಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತ್ತು ಪ್ರಕಾಶ್ ತಲಾ 8 ಮತಗಳನ್ನು ಪಡೆದಿದ್ದರಿಂದ ಸಮಬಲ ಉಂಟಾಗಿತ್ತು. ಹಲವು ಕಾರಣಗಳಿಂದ ಕೋಟೆ ಕಸಬಾ ಪ್ರಾಥಮಿಕ ಕೃಷಿ ಸಹಕಾರ ಸಂಘದ ಪ್ರತಿನಿಧಿ ದಶರಥ ಅವರು ಚಲಾಯಿಸಿದ ಮತದ ವಿಚಾರಕ್ಕೆ ಎರಡು ಕಡೆಯಿಂದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಮತದ ಎಣಿಕೆಯನ್ನು ತಡೆಹಿಡಿಯಲಾಗಿತ್ತು.

ನ್ಯಾಯಾಲಯ ಎರಡು ಕಡೆ ವಿಚಾರಣೆಯನ್ನು ಆಲಿಸಿ ಸೆ.8ರಂದು ತೀರ್ಪು ನೀಡಿತ್ತು. ಮಂಗಳವಾರ ಚುನಾವಣಾಧಿಕಾರಿಗಳು ನ್ಯಾಯಾಲಯದ ತೀರ್ಪಿನಂತೆ ಮತ ಎಣಿಕೆ ಮಾಡಿದಾಗ, ಕಸಬಾ ಬ್ಯಾಂಕಿನ ಅಧ್ಯಕ್ಷ ದಶರಥ ಚಲಾಯಿಸಿದ ಮತ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಲ್ಲಿಕೆಯಾಗಿತ್ತು. ಇದರಿಂದ ಶಾಸಕ ಅನಿಲ್ ಚಿಕ್ಕಮಾದು 9 ಮತ ಗಳಿಸಿ ಜಯ ಗಳಿಸಿದ್ದಾರೆ. ಪ್ರತಿಸ್ಪರ್ಧಿ ಗುಂಡತ್ತೂರು ಪ್ರಕಾಶ ಎಂಟು ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಚುನಾವಣಾಧಿಕಾರಿ ಆಶಪ್ಪ ಅವರು ಅನಿಲ್ ಚಿಕ್ಕಮಾದು ಅವರ ಆಯ್ಕೆಯನ್ನು ಘೋಷಿಸಿ ಅವರಿಗೆ ಪ್ರಮಾಣ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಕಸಬಾ ಬ್ಯಾಂಕಿನ ಅಧ್ಯಕ್ಷ ದಶರಥ ಅವರನ್ನ ಶಾಸಕ ಅನಿಲ್ ಚಿಕ್ಕಮಾದು ಸನ್ಮಾನಿಸಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಭಿನಂದಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮನೆಗೆ ಆಗಮಿಸಿದ ಶಾಸಕರನ್ನು ತಾಯಿ ನಾಗಮ್ಮ, ಪತ್ನಿ ಸೌಮ್ಯಾ ಆರತಿ ಎತ್ತಿ ಶುಭಾಶಯ ಕೋರಿದರು.

ಪ್ರತಿನಿಧಿಗಳಾದ ಸತೀಶ್ ಗೌಡ, ಭಾಸ್ಕರ, ಮನಗನಹಳ್ಳಿ ಮಾದಪ್ಪ, ಮಹೇಶ್, ಆನಂದ, ಗೋವಿಂದರಾಜು, ಮುಖಂಡರಾದ ಜಿಯಾರ ಸೋಮೇಶ್, ನಾಗನಹಳ್ಳಿ ಪ್ರದೀಪ್, ರಾಜುವಿಶ್ವಕರ್ಮ, ಹೋಂಡಾ ನಯಾಜ್, ರವಿ, ಸ್ಟಾನಿ, ನರಸಿಂಹಮೂರ್ತಿ, ಗುರುಸ್ವಾಮಿ, ರಾಜನಾಯಕ, ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net