

ಹುಬ್ಬಳ್ಳಿ: ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಕಳೆದೆರಡು ದಿನ ನಡೆಸಿದ ಹೋರಾಟಕ್ಕೆ ಮಣಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಇಲ್ಲಿಯ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಶುಕ್ರವಾರ ರಾತ್ರಿ ಈ ಕುರಿತು ಆದೇಶ ಮಾಡಿದರು. ಆದೇಶ ಮಾಡುವವರೆಗೂ ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಪಟ್ಟು ಹಿಡಿದು ಕುಳಿತಿದ್ದರು.
ಕಳೆದ ವರ್ಷದಂತೆ ಸಂಜೀವ ಬಡಸ್ಕರ್ ಅಧ್ಯಕ್ಷತೆಯ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಗೆ ಸೆ. 19ರಿಂದ 21ರವರೆಗೆ 3 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಆಯುಕ್ತರು ಶರತ್ತುಬದ್ಧ ಅನುಮತಿ ನೀಡಿದ್ದಾರೆ. ಕಳೆದ ವರ್ಷ ಇದೇ ಮೈದಾನದಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲಾಗಿತ್ತು.
ಸೆ. 19ರ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಈದ್ಗಾ ಮೈದಾನದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಬೇಕು. ಸೆ. 21ರಂದು ಮಧ್ಯಾಹ್ನ 12ರೊಳಗೆ ವಿಸರ್ಜನಾ ಕಾರ್ಯ ಕೈಗೊಳ್ಳಬೇಕು. ಪಾಲಿಕೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸೂಚಿಸಿದ ಜಾಗದಲ್ಲಿ 30 ಅಡಿ ಉದ್ದ ಮತ್ತು 30 ಅಡಿ ಅಗಲಕ್ಕೆ ಮೀರದಂತೆ ಪೆಂಡಾಲ ಹಾಕಬೇಕು. ಗಣೇಶ ಉತ್ಸವ ಮೂರ್ತಿಯ ಹೊರತಾಗಿ ವಿವಾದಿತ ಫೋಟೋ, ಬಾವುಟ, ಭಿತ್ತಿಪತ್ರಗಳನ್ನಉ ಅಳವಡಿಸಬಾರದು. ಡಿಜೆ, ಕರ್ಕಶ ಯುಕ್ತ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಮನರಂಜನಾ, ಇನ್ನಿತಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪಟಾಕಿ ಸಿಡಿಸಿ ಸಂಭ್ರಮ
ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಆಯುಕ್ತರು ಅನುಮತಿ ನೀಡುತ್ತಿದ್ದಂತೆ ಗುರುವಾರ ಮಧ್ಯಾಹ್ನದಿಂದ ಪ್ರತಿಭಟನೆ, ಅಹೋರಾತ್ರಿ ಧರಣಿ ನಿರತ ಪಾಲಿಕೆಯ ಬಿಜೆಪಿ ಸದಸ್ಯರು, ಪಕ್ಷದ ಮುಖಂಡರು, ಹಿಂದು ಸಂಘಟನೆಗಳ ಕಾರ್ಯಕರ್ತರು ಪಾಲಿಕೆ ಕಚೇರಿ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೋಲೋ ಗಣೇಶ ಮಹಾರಾಜ ಕೀ..ಜೈ. ಎಂದು ಘೊಷಣೆ ಕೂಗಿದರು.