ಕರಾವಳಿ ರಸ್ತೆಗೆ ಕೊನೆಗೂ ಕಾಂಕ್ರೀಟ್

kota road webb
Published on

ಕೋಟ: ಹಲವು ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಸದ್ದುಮಾಡಿದ ಕರಾವಳಿ ರಸ್ತೆಗೆ ಕೊನೆಗೂ ಮುಕ್ತಿ ದೊರಕಿದೆ.

ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಪಡುಕರೆಯಿಂದ ಸಾಲಿಗ್ರಾಮ ಪ.ಪಂ ಮೂಲಕ ಹಾದುಹೋಗುವ ಕೋಡಿ ಕನ್ಯಾಣದ ವರೆಗಿನ ಕಡಲತಡಿಯ ಸನಿಹದ ರಸ್ತೆ ಹಲವು ವರ್ಷಗಳಿಂದ ಹೊಂಡ ಬಿದ್ದಿದ್ದು, ಜನಸಾಮಾನ್ಯರಿಗೆ ಹಾಗೂ ವಾಹನ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿತ್ತು. ರಸ್ತೆ ಅಭಿವೃದ್ಧಿ ಕುರಿತಂತೆ ಹಲವು ಪ್ರತಿಭಟನೆಗಳು ನಡೆದಿದ್ದವು. ಪ್ರಸಕ್ತ ಸ್ಥಳೀಯರ ಹೋರಾಟ ಗ್ರಾಪಂ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಸ್ಥಳೀಯ ಶಾಸಕರ ನಿರ್ದೇಶನದಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಲ್ಲಿ ಸುಮಾರು 5 ಕಿ.ಮೀ ವರೆಗಿನ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 7ಕೋಟಿ ರೂ. ವೆಚ್ಚದ ಈ ರಸ್ತೆ 6 ಮೀಟರ್ ಅಗಲ ಹೊಂದಿದೆ.

ಚುನಾವಣಾ ಬಹಿಷ್ಕಾರ ಕರೆಗೆ ಎಚ್ಚೆತ್ತ ಆಡಳಿತ: ಸಾಮಾನ್ಯವಾಗಿ ಸಾಕಷ್ಟು ವಾಹನಗಳು ಸಂಚರಿಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದರು. ಸಂಪೂರ್ಣ ಹದಗೆಟ್ಟಿದ್ದ ರಸ್ತೆ ಸರಿಪಡಿಸುವಂತೆ ಸ್ಥಳೀಯ ಜನರು, ಆಟೋ, ವಾಹನ ಚಾಲಕರು ಪ್ರತಿಭಟಿಸುವ ಮೂಲಕ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದರು.ಪ್ರತಿಭಟನೆಗೂ ಬಗ್ಗದಿದ್ದಾಗ ಚುನಾವಣಾ ಬಹಿಷ್ಕಾರದ ನಿರ್ಣಯ ಕೈಗೊಳ್ಳಲಾಯಿತು. ಅಷ್ಟರಲ್ಲಿ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ರಸ್ತೆ ಅಭಿವೃದ್ಧಿಗೆ ಮುಂದಾಯಿತು.

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆಗೆ ಶಾಸಕರ ಹಾಲಾಡಿ ಶ್ರೀನಿವಾಸ ಶಿಫಾರಸಿನ ಮೇರೆಗೆ ಆಗಿನ ಮೀನುಗಾರಿಕಾ ಸಚಿವ ಪ್ರಸ್ತುತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ 7ಕೋಟಿ ಬಿಡುಗಡೆಗೊಳಿಸಿ ಸದ್ಯ ಸುಸಜ್ಜಿತ ರಸ್ತೆಯಾಗಿ ನಿರ್ಮಾಣಗೊಂಡಿದೆ. - ಶಿವರಾಮ್(ಅಣ್ಣಪ್ಪ) ಪೂಜಾರಿ ಪಡುಕರೆ ಕೋಟ ರಿಕ್ಷಾ ಚಾಲಕ ಮಾಲೀಕ ಸಂಘದ ಅಧ್ಯಕ್ಷ ಗ್ರಾಮಸ್ಥರ ಹೋರಾಟದ ಫಲವಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಸ್ತೆಗೆ ಅನುದಾನ ಒದಗಿಸುವ ಮೂಲಕ ಗ್ರಾಮಸ್ಥರ ಬಹುವರ್ಷಗಳ ಕನಸನ್ನು ನನಸಾಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಿ ಸರ್ವ ಋತು ರಸ್ತೆಯನ್ನಾಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು. - ರಘು ತಿಂಗಳಾಯ ಪಡುಕರೆ ಕೋಟತಟ್ಟು ಗ್ರಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net