

ಮಡಿಕೇರಿ:
ಚುನಾವಣೆ ಹಿನ್ನೆಲೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ವಿಶೇಷ ಅಭಿಯಾನ ಮೂಲಕ ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ನಮೂನೆ-6, ನಮೂನೆ-7 ಮತ್ತು ನಮೂನೆ-8 ರಲ್ಲಿ ಯುವ ಮತದಾರರ ಸೇರ್ಪಡೆ ಮತ್ತಿತರ ಕಾರ್ಯಗಳನ್ನು ಬಿಎಲ್‍ಒ ಮೂಲಕ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ ಎಂದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ನಿರಂತರ ಪ್ರಕ್ರಿಯೆಯಾಗಿದ್ದು, ಯುವ ಮತದಾರರು ಹೆಸರು ಸೇರ್ಪಡೆ ಮಾಡಬಹುದಾಗಿದೆ ಎಂದರು.
ಸದ್ಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಂಬಂಧಿಸಿದಂತೆ ವೋಟರ್ ಆಪ್ ಮೂಲಕ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 546 ಮತಗಟೆಗಳಿದ್ದು, ಒಟ್ಟು 4,63,414 ಮತದಾರರು ಇದ್ದಾರೆ. ಅದರಲ್ಲಿ 2,27,339 ಪುರುಷ ಮತದಾರರು, 2,36,059 ಮಹಿಳಾ ಮತದಾರರು ಇದ್ದಾರೆ. ಹಾಗೂ 16 ಮಂದಿ ಇತರ ಮತದಾರರು ಇದ್ದಾರೆ.
ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಒಟ್ಟು 2,35,139 ಮತದಾರರು ಇದ್ದಾರೆ. ಇವರಲ್ಲಿ 1,14,580 ಪುರುಷ ಮತದಾರರು, 1,20,550 ಮಹಿಳಾ ಮತದಾರರು ಹಾಗೂ 9 ಮಂದಿ ಇತರೆ ಮತದಾರರು ಇದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಒಟ್ಟು 2,28,275 ಮಂದಿ ಮತದಾರರು ಇದ್ದಾರೆ. ಇವರಲ್ಲಿ 1,12,759 ಪುರುಷ ಮತದಾರರು, 1,15,509 ಮಹಿಳಾ ಮತದಾರರು ಹಾಗೂ 7 ಮಂದಿ ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನಿಡಿದರು.
ಸೋಮವಾರ (22-01-2024) ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ:
27-10-2023ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಗೆ ಹೊಲಿಸಿದ್ದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಂದ 3498 ಮತದಾರರು ನಿವ್ವಳ ಬದಲಾವಣೆ ಆಗಿದೆ ತಿಳಿಸಿದರು.
ಪ್ರಸ್ತುತ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ನಡೆಯುತಿದ್ದು, ಈ ಅವಧಿಯಲ್ಲಿ ಮತದಾರರ ಪಟ್ಟ್ಟಿಗೆ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.