ಜೇಡಿಮಣ್ಣಿನ ಗಣೇಶಮೂರ್ತಿಗೆ ಹೆಚ್ಚಿದ ಬೇಡಿಕೆ

MKG1A
Published on

ಷಣ್ಮುಖ. ಬಿ.ಈ. ನ್ಯಾಮತಿ
ಗಣೇಶ ಚತುರ್ಥಿಗೆ ದಿನಗಣನೆ ಆರಂಭಗೊಂಡಿದ್ದು, ತಾಲೂಕಿನಾದ್ಯಂತ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಕಲಾವಿದರು ಹಗಲು, ರಾತ್ರಿ ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ.

ಪಟ್ಟಣದ ಕುಂಬಾರ ಬೀದಿ ಒಳಹೊಕ್ಕರೆ ಎಲ್ಲೆಡೆ ವಿವಿಧ ಆಕಾರದ ಗಣೇಶ ಮೂರ್ತಿ ತಯಾರಿಕೆಯಲ್ಲಿ ಮನೆ ಮಂದಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.

ಗಣೇಶ ಚತುರ್ಥಿ ಹಿಂದಿನ ದಿನದವರೆಗೂ ಮನೆ ಮಂದಿಗೆ ಕೈ ತುಂಬಾ ಕೆಲಸ. ಎಲ್ಲರೂ ಒಟ್ಟಾಗಿ ಮೂರ್ತಿಯ ವಿವಿಧ ಭಾಗಗಳನ್ನು ತಯಾರಿಸುತ್ತಾರೆ.

ಜೇಡಿ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕಲಾವಿದರು ಜೇಡಿ ಮಣ್ಣನ್ನು ಲೋಡ್‌ಗಟ್ಟಲೇ ಸಂಗ್ರಹಿಸಿ ಮೂರ್ತಿ ತಯಾರಿಕೆಯಲ್ಲಿದ್ದಾರೆ.

ಕುಂಬಾರರು ವರ್ಷಪೂರ್ತಿ ಬೇರೆ ಬೇರಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದರೂ ಗಣೇಶ ಮೂರ್ತಿ ತಯಾರಿಕೆಗೆ ನಾಲ್ಕೈದು ತಿಂಗಳಷ್ಟೇ ತೊಡಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಗಣೇಶ ಮೂರ್ತಿ ಬೇಡಿಕೆಯೂ ತಗ್ಗುತ್ತಿರುವುದು ತಯಾರಕರಿಗೆ ಆತಂಕ ಮೂಡಿಸಿದೆ.

ಭಕ್ತರ ಇಷ್ಟಕ್ಕನುಸಾರವಾಗಿ ಒಂದು ಅಡಿಯಿಂದ ಆರೇಳು ಅಡಿಗಳವರೆಗೂ ಗಣೇಶ ಮೂರ್ತಿ ಇಲ್ಲಿ ಸಿದ್ಧಗೊಳ್ಳುತ್ತವೆ. ಅಳತೆ ಶೈಲಿ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ.

ಇಲ್ಲಿ ತಯಾರಾಗುವ ಮೂರ್ತಿಗಳನ್ನು ದಾವಣಗೆರೆ, ಶಿವಮೊಗ್ಗ ಹಾವೇರಿ, ಬಳ್ಳಾರಿ, ಗದಗ, ಚಿಕ್ಕಮಗಳೂರು ರಾಣೆಬೆನ್ನೂರು, ಸೊರಬ, ಜಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ.

ಗಣೇಶ ಚತುರ್ಥಿ ಸಂದರ್ಭದಲ್ಲಿ ಮಾತ್ರ ಕುಂಬಾರರಿಗೆ ಕೆಲಸ ಇದ್ದು ನಂತರ ಬೇರೆ ಕೆಲಸ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಾರೆ. ಸರ್ಕಾರ ಪಿಒಪಿ ಮೂರ್ತಿ ಮಾರಾಟ ವಿರುದ್ಧ ಕಠಿಣ ಕ್ರಮ ಕೈಗೊಂಡು ಕುಂಬಾರ ಕಸುಬಿಗೆ ಬೇಡಿಕೆ ಬರುವಂತ ಯೋಜನೆ ರೂಪಿಸಿಬೇಕಿದೆ.
ರಾಜಶೇಖರ್, ಕರ್ನಾಟಕ ಪ್ರದೇಶ ಕುಂಬಾರರ ಯುವಸಂಘದ ಅಧ್ಯಕ್ಷ.

ನಮ್ಮದು ಇಪ್ಪತ್ತೊಂದು ಜನ ಇರುವ ತುಂಬು ಕುಟುಂಬ. ಕಳೆದ ಮೂವತ್ತಾರು ವರ್ಷಗಳಿಂದ ನಾವು ಗಣೇಶ ಮೂರ್ತಿ ತಯಾರಿಕೆ ಮಾಡುತ್ತಿದ್ದು, ಈ ವರ್ಷ ಮಳೆ ಕೊರತೆಯಿಂದಾಗಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಚನ್ನೇಶ್, ಗಣೇಶ ಮೂರ್ತಿ ತಯಾರಕ.

ಜೇಡಿ ಮಣ್ಣಿನಿಂದ ಮಾಡುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನಷ್ಟೆ ಮಾಡುತ್ತೇವೆ. ಕಲಾವಿದರಿಗೆ ಸರ್ಕಾರ ಮಾರಾಟ ಜಾಗದಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಕಳೆದ ವರ್ಷ ಮಳೆಯಿಂದಾಗಿ ಮೂರ್ತಿಗಳು ಹಾಳಾದರೂ ಯಾರಿಂದಲೂ ಸಹಾಯ ದೊರೆಯದೇ ನಷ್ಟ ಅನುಭವಿಸಿದ್ದೇವು. ಈ ವರ್ಷ ಲಾಭದ ನಿರೀಕ್ಷೆ ಇದೆ.
ಉಮೇಶ, ಕುಂಬಾರ ಗಣೇಶ ಮೂರ್ತಿ ಕಲಾವಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net