ದೀಪಾವಳಿ ಬಳಿಕ ವಾರ್ಡ್ ವಿಂಗಡಣೆ ಅಂತಿಮ ಅಧಿಸೂಚನೆ

GBA
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ರಚನೆಯಾಗಿರುವ ಪಂಚ ನಗರ ಪಾಲಿಕೆಗಳಲ್ಲಿನ ವಾರ್ಡ್‌ಗಳ ವಿಂಗಡಣೆ ಪ್ರಕ್ರಿಯೆಗಾಗಿ ಹೊರಡಿಸಿದ್ದ ಕರಡು ಅಧಿಸೂಚನೆಗೆ ಬುಧವಾರ ಗಡುವು ಮುಗಿದಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿರುವ ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ ದೀಪಾವಳಿ ಹಬ್ಬದ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಲಿದೆ.

ಐದು ಕಾರ್ಪೋರೇಷನ್‌ಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ವಿಂಗಡಿಸಿ ಕಳೆದ ಸೆ.30ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗೆ 15 ದಿನ ಗಡುವು ನೀಡಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯ ಆಕ್ಷೇಪಣೆಗಳು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿವೆ. ಮುಖ್ಯವಾಗಿ ವಾಡ್‌ಗಳನ್ನು ವಿಂಗಡಿಸುವಾಗ ಜನಸಂಖ್ಯೆ, ಬಡಾವಣೆ ಪ್ರದೇಶ, ಮುಖ್ಯರಸ್ತೆಗಳ ಗಡಿ ವಿಷಯದಲ್ಲಿ ಮಾರ್ಗಸೂಚಿಯಂತೆ ವಿಂಗಡಿಸಿಲ್ಲ. ಅಧಿಕಾರಿಗಳು ಮನಸೋಇಚ್ಛೆ ವಾರ್ಡ್‌ಗಳನ್ನು ರಚಿಸಿ ಅವುಗಳು ಸ್ಥಳೀಯರಿಗೆ ಒಳಿತು ಮಾಡುವ ಬದಲು ಸಮಸ್ಯೆ ಸೃಷ್ಟಿಸಲಿವೆ ಎಂಬ ಆಕ್ಷೇಪ ಹಲವರಿಂದ ಕೇಳಿಬಂದಿದೆ.

ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ವಾರ್ಡ್‌ಗಳಿದ್ದರೂ, ಗಡಿ ಗುರುತಿಸುವಾಗ ಬೇಕೆಂದೇ ತಪ್ಪು ಮಾಡಲಾಗಿದೆ. ಒಂದು ವಾರ್ಡ್‌ಗೆ ದೂರದ ಪ್ರದೇಶದಲ್ಲಿರುವ ಒಂದೆರಡು ರಸ್ತೆಗಳ ಪ್ರದೇಶ ಮಾತ್ರ ಸೇರಿಸಿ ಗೊಂದಲ ಮೂಡಿಸಲಾಗಿದೆ. ಇನ್ನೂ ಕೆಲವೆಡೆ ಒಂದೇ ಲೇಔಟ್‌ಅನ್ನು 3 ವಾರ್ಡ್‌ಗಳಿಗೆ ಹಂಚಿಕೆ ಮಾಡಿ ಸ್ಥಳೀಯ ಅಸ್ಮಿತೆಗೆ ಧಕ್ಕೆ ಬರುವ ರೀತಿ ರಚಿಸಲಾಗಿದೆ. ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ಆಡಳಿತ ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸಿದ ಕಾರಣ ಅವೈಜ್ಞಾನಿಕ ವಾರ್ಡ್‌ಗಳು ರೂಪುಗೊಂಡಿವೆ ಎಂದು ಕೆಲ ಮಾಜಿ ಕಾರ್ಪೊರೇಟರ್‌ಗಳು ದೂರಿದ್ದಾರೆ.

ಕೆಲ ವಾರ್ಡ್‌ಗಳ ಹೆಸರು ಬದಲಾವಣೆ?:

ಐದು ಪಾಲಿಕೆಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಪ್ರತಿ ಪಾಲಿಕೆಯ ನಾಲ್ಕೈದು ವಾರ್ಡ್‌ಗಳಿಗೆ ಮಹಾಪುರುಷರು/ಗಣ್ಯರ ಹೆಸರು ಇಡಲಾಗಿದೆ. ಇದೇ ಇನ್ನೂ ಕೆಲ ವಾರ್ಡ್‌ಗಳಿಗೆ ಕನ್ನಡ ಸಾಹಿತಿಗಳ ಹೆಸರಿಡುವಂತೆ ಸಲಹೆ ನೀಡಲಾಗಿದೆ. ಇದಲ್ಲದೆ, ಕೆಲ ವಾರ್ಡ್‌ಗಳ ಹೆಸರನ್ನು ತಪ್ಪಾಗಿ ನಮೂದಿಸಿದ್ದು, ಅವುಗಳನ್ನು ಸರಿಪಡಿಸಲು ಆಕ್ಷೇಪಣೆ ಸಲ್ಲಿಕೆಯಾಗಿವೆ. ಇವುಗಳಲ್ಲಿ ಯಲಹಂಕ ಸ್ಯಾಟಲೈಟ್ ಟೌನ್ ವಾರ್ಡ್ ಕನ್ನಡದಲ್ಲಿ ‘ಯಲಹಂಕ ಉಪಗ್ರಹ ವಾರ್ಡ್’ ಎಂದು ಅಪಭ್ರಂಶಗೊಂಡಿದೆ. ಇಂತಹ ತಪ್ಪುಗಳನ್ನು ಸರಿಪಡಿಸುವುದಾಗಿ ಇತ್ತೀಚಿಗೆ ಜಿಬಿಎ ಮುಖ್ಯ ಆಯುಕ್ತರು ಭರವಸೆ ನೀಡಿದ್ದರು. ಹಾಗಾಗಿ ಕೆಲ ವಾರ್ಡ್‌ಗಳ ಹೆಸರು ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ.

ಯಾವ ಪಾಲಿಕೆ, ಎಷ್ಟು ವಾರ್ಡ್?:

ಉತ್ತರ ಪಾಲಿಕೆ 72

ದಕ್ಷಿಣ ಪಾಲಿಕೆ 72

ಪೂರ್ವ ಪಾಲಿಕೆ 50

ಪಶ್ಚಿಮ ಪಾಲಿಕೆ 111

ಕೇಂದ್ರ ಪಾಲಿಕೆ 63

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net