ಯಲಹಂಕ ವಲಯದಲ್ಲಿ ಶೇ.30 ಆಸ್ತಿಗಳಿಗೆ ಅಂತಿಮ ಇ-ಖಾತಾ

bbmp ekhata
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿರುವ ಸ್ವತ್ತುಗಳ ಪೈಕಿ ಶೇ.30ಕ್ಕೆ ಅಂತಿಮ ಇ-ಖಾತಾ ಸೌಲಭ್ಯವನ್ನು ನೀಡಲಾಗಿದೆ. ಇದು ಇಡೀ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಸೌಲಭ್ಯ ಒದಗಿಸಿರುವ ಸಾಧನೆಗೆ ಯಲಹಂಕ ವಲಯ ಭಾಜನವಾಗಿದೆ.

ಯಲಹಂಕ ವಲಯದಲ್ಲಿ ಒಟ್ಟು 2,28,146 ಸ್ವತ್ತುಗಳು ಇವೆ. ಈ ಪೈಕಿ 71,055 ಸ್ವತ್ತುಗಳಿಗೆ (ಶೇ.30) ಅಂತಿಮ ಇ-ಖಾತಾ ವಿತರಿಸಲಾಗಿದೆ. ಬ್ಯಾಟರಾಯನಪುರ ವಿಭಾಗದಲ್ಲಿನ ಒಟ್ಟು 1,81,135 ಸ್ವತ್ತುಗಳ ಪೈಕಿ 51,289 (ಶೇ.28.31) ಆಸ್ತಿದಾರರಿಗೂ ಈ ಸೌಲಭ್ಯ ನೀಡಲಾಯಿತು.

ಬ್ಯಾಟರಾಯನಪುರ ಕ್ಷೇತ್ರದ ಸಹಕಾರನಗರದಲ್ಲಿ ಭಾನುವಾರ ನಡೆದ ಇ- ಖಾತಾ ಮೇಳವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಬಿಬಿಎಂಪಿಯ ಇ- ಖಾತಾ ವ್ಯವಸ್ಥೆಗೆ ಭಾರತ ಸರ್ಕಾರದಿಂದ 2024-25ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಸಂದಿದೆ ಎಂದರು.

677 ಮಂದಿಗೆ ಸ್ಥಳದಲ್ಲೇ ಸೌಲಭ್ಯ:

ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸ್ಥಳದಲ್ಲೇ ಸ್ವೀಕರಿಸಿದ 1,679 ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳಿಸಿ ಈ ಪೈಕಿ 677 ಜನರಿಗೆ ಅಂತಿಮ ಇ-ಖಾತಾ ವಿತರಿಸಲಾಯಿತು. ಹೆಚ್ಚಿನ ನಾಗರಿಕರು ಆಗಮಿಸಿದ್ದರಿಂದ ಸೌಲಭ್ಯ ಪಡೆಯಲು ನಿಧಾನವಾದ ಕಾರಣ ಸೋಮವಾರವೂ ಮೇಳ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net