

ಬೆಂಗಳೂರು: ಹೆಬ್ಬಾಳ ಕ್ಷೇತ್ರದ ಆರ್.ಟಿ.ನಗರದಲ್ಲಿ ಬುಧವಾರ ತೆರೆ ಕಂಡ ಎರಡು ದಿನಗಳ ಇ-ಖಾತಾ ಮೇಳದಲ್ಲಿ ಒಟ್ಟು 750 ಮಂದಿಗೆ ಅಂತಿಮ ಇ-ಖಾತಾ ಪತ್ರ ಸೌಲಭ್ಯ ನಿಡಲಾಯಿತು.
ಮೇಳದ ಎರಡೂ ದಿನ ನಾಗರಿಕರಿಂದ ಅರ್ಜಿ ಸ್ವೀಕರಿಸಿ ಸೌಲಭ್ಯ ಒದಗಿಸಲು ಹತ್ತು ಕೌಂಟರ್‌ಗಳಲ್ಲಿ 40 ಲ್ಯಾಪ್‌ಟಾಪ್ ಮೂಲಕ ಸಿಬ್ಬಂದಿ ಕಾರ್ಯನಿರ್ವಹಿಸಿದರು. ನೂಕುನುಗ್ಗಲು ಉಂಟಾಗದಿರಲು ಟೋಕನ್ ವಿತರಿಸಿ ಮೊದಲು ಬಂದವರಿಗೆ ಪ್ರಥಮ ಆದ್ಯತೆ ಮಾದರಿಯಲ್ಲಿ ಅರ್ಜಿ ವಿಲೇವಾರಿ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಶಾಸಕ, ಸಚಿವ ಬೈರತಿ ಸುರೇಶ್ ಎರಡೂ ದಿನ ಮೇಳದಲ್ಲಿ ಹಾಜರಿದ್ದು, ಜನರಿಗೆ ಇ-ಖಾತಾ ಸೌಲಭ್ಯ ಒದಗಿಸಲು ನೆರವಾದರು. ಮುಂದಿನ ದಿನಗಳಲ್ಲಿ 50 ಸಾವಿರ ಮಂದಿಗೆ ಇ-ಖಾತಾ ವಿತರಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಒಟ್ಟು 771 ಟೋಕನ್ ವಿತರಿಸಲಾಗಿತ್ತು. ಈ ಪೈಕಿ ಆಸ್ತಿಗಳ ಸಮರ್ಪಕವಾದ ದಾಖಲಾತಿ ಸಲ್ಲಿಸಿದ 750 ಮಂದಿಗೆ ಸೌಲಭ್ಯ ನೀಡಿದ್ದು, 10 ಮಂದಿಗೆ ಹೆಚ್ಚುವರಿ ದಾಖಲೆ ಒದಗಿಸಲು ಸೂಚಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ಎಂಟೂ ವಾರ್ಡ್‌ಗಳಿಗೆ ಸಂಬಂಧಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಕೆಲ ದಿನಗಳಲ್ಲೇ ಅಂತಿಮ ಇ-ಖಾತಾ ನೀಡಲಾಗುವುದು ಎಂದು ಬಿಬಿಎಂಪಿಯ ಕಂದಾಯ ಅಧಿಕಾರಿ ಟಿ.ಶ್ರೀನಿವಾಸಮೂರ್ತಿ ತಿಳಿಸಿದರು.