ಈರುಳ್ಳಿಗೆ ಸ್ಟೆಂ ಫೀಲಿಯಂ ಮಾರಿ

Eerulli
Published on

| ಸತೀಶ್ ಕೆ.ಬಳ್ಳಾರಿ ಬೆಂಗಳೂರು / ಹೀರಾನಾಯ್ಕ ಟಿ. ವಿಜಯಪುರ

ರಾಜ್ಯದಲ್ಲಿ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಈರುಳ್ಳಿ ಬೆಳೆಗೆ ಫಂಗಸ್​ನಿಂದ ‘ಸ್ಟೆಂ ಫೀಲಿಯಂ’ ರೋಗ ಕಾಣಿಸಿಕೊಂಡಿದೆ. ಇದರಿಂದ ಸಾವಿರಾರು ಹೆಕ್ಟೇರ್ ಈರುಳ್ಳಿ ನಷ್ಟವಾಗುವ ಆತಂಕ ಸೃಷ್ಟಿಯಾಗಿದೆ. ಪರಿಣಾಮ ಈರುಳ್ಳಿ ಬೆಲೆ ದುಬಾರಿ ಆಗುವ ಸಾಧ್ಯತೆ ಕಾಣಿಸಿವೆ.

ಬೆಳೆ ಮೇಲೆ ಬಿದ್ದ ನೀರು ಆವಿಯಾಗದೆ ಅವುಗಳ ಮೇಲೆ ಶಿಲೀಂಧ್ರ (ಫಂಗಸ್) ಬೆಳೆಯುತ್ತಿದೆ. ಇದರಿಂದಾಗಿ ಸ್ಟೆಂ ಫೀಲಿಯಂ (ಸ್ಥಳೀಯ ಹೆಸರು ಕಿರಣಿ ರೋಗ) ರೋಗ ಆವರಿಸಿದೆ. ರಾಜ್ಯದಲ್ಲಿ 2020-21ನೇ ಸಾಲಿನ ಮುಂಗಾರು ಮಳೆ ಆಧಾರವಾಗಿ 1,52,366 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಬಳ್ಳಾರಿ, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುತ್ತಿದ್ದು, ಎಲ್ಲ ಭಾಗದಲ್ಲಿ ಈ ರೋಗ ಪತ್ತೆಯಾಗಿದೆ. ಈ ರೋಗದಿಂದಾಗಿ ಶೇ.20 ಎಂದರೆ 1.52 ಲಕ್ಷ ಹೆಕ್ಟೇರ್​ನಲ್ಲಿ 30 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ನಷ್ಟವಾ ಗಲಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ. ಶಿಲೀಂಧ್ರ ಈರುಳ್ಳಿ ಬೆಳೆಯ ಎಲೆಗಳನ್ನು ಕೊಳೆಯುವಂತೆ ಮಾಡುತ್ತದೆ.

ಈರುಳ್ಳಿಗೆ ಸಾಮಾನ್ಯವಾಗಿ ಕಾಡುತ್ತಿರುವ ನೇರಳೆ ಮಚ್ಚೆ ರೋಗ, ಚಿಬ್ಬುರೋಗ ಕೂಡ ಕಾಣಿಸಿದ್ದು, ಎಲೆ ಬೆಳವಣಿಗೆ ಕುಂಠಿತವಾಗುತ್ತದೆ. ನಂತರ ಇಳುವರಿ ತಗ್ಗುತ್ತದೆ. ಇದನ್ನೂ ಓದಿ: ಗಂಡನಿಗಾಗಿ ರಾಷ್ಟ್ರೀಯ ಬ್ಯಾಡ್ಮಿಂಟನ್​ ಶಿಬಿರದಿಂದ ಹೊರಗುಳಿದ ಸೈನಾ..!

ರೋಗ ನಿಯಂತ್ರಣ ಹೇಗೆ?: ಮೋಡಕವಿದ ವಾತಾವರಣವಿದ್ದಲ್ಲಿ ಶಿಲೀಂಧ್ರನಾಶಕ ಮತ್ತು ಕೀಟನಾಶಕ ಮಿಶ್ರಣವನ್ನು 3-5 ದಿನಗಳಿಗೊಮ್ಮೆ ಸಿಂಪಡಿಸಬೇಕು. ಶಿಲೀಂಧ್ರ ನಾಶಕವಾಗಿ ಮ್ಯಾಂಕೋಜೆಬ್, ಕವಚ್, ಫಾಂಟಸ್, ಕೀಟನಾಶಕವಾಗಿ ಕಾನ್ಪಿಡಾರ್, ಕರಾಟೆ ಔಷಧ ಬಳಸಬಹುದು. ಸತತ 3 ದಿನ ಬಿಸಿಲು ಬಿದ್ದರೆ, ಶಿಲೀಂಧ್ರ ರೋಗ ತಂತಾನೇ ನಿಯಂತ್ರಣಕ್ಕೆ ಬರುತ್ತದೆ. ರೋಗ ಹತೋಟಿಗೆ ಪ್ರೊಫಿಕೊನಜೋಲ್ ಮತ್ತು ಡೈಫೆನ್​ಕೊನಜೋಲ್ ಅಥವಾ ಡೈಫಿನ್​ಕೊನಜೋಲ್ ಶಿಲೀಂಧ್ರ್ರಾಶಕ ಅಥವಾ ಹೆಕ್ಜಾಕೊನ್​ಜೋಲ್ ಔಷಧವನ್ನು ಪ್ರತಿ ಲೀಟರ್ ನೀರಿಗೆ 1 ಮಿ.ಲೀ.ನಂತೆ ಹಾಕಿ ಸಸಿ ಚೆನ್ನಾಗಿ ತೋಯುವಂತೆ ಸಿಂಪಡಿಸಬೇಕು. ಶೇ 1.0ರ ಪೊಟ್ಯಾಸಿಯಂ ನೈಟ್ರೇಟ್ ನೀಡಬೇಕು ಅಥವಾ ಶೇ. 1ರ 19:19:19 ಸಿಂಪಡಿಸಬೇಕು ಎಂದು ವಿಜಯಪುರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸುತ್ತಾರೆ.

ಬೆಲೆ ಏರಿಕೆ ಸಾಧ್ಯತೆ: ದೇಶದ 4ನೇ ಅತಿದೊಡ್ಡ ಈರುಳ್ಳಿ ಉತ್ಪಾದಕ ಕರ್ನಾಟಕದಲ್ಲಿ ಪ್ರತಿವರ್ಷ 1.2 ಲಕ್ಷದಿಂದ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಮೋಡಕವಿದ ವಾತಾವರಣ ಮತ್ತು ಮಳೆ ಮುಂದುವರಿದರೆ ಈರುಳ್ಳಿ ಬೆಳೆ ನಷ್ಟವಾಗುವ ಮೂಲಕ ಕಳೆದ ವರ್ಷದಂತೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ, ಮಹಾರಾಷ್ಟ್ರ ಮತ್ತು ಗುಜರಾತ್​ನಿಂದ ಆಮದಾಗುತ್ತಿದ್ದ ಈರುಳ್ಳಿ ಗಡ್ಡೆ ಕೂಡ ಮಳೆಗೆ ಸಿಕ್ಕು ಕೊಳೆಯಲು ಆರಂಭವಾಗಿದ್ದು, ಬೆಳೆ ಹೆಚ್ಚಳದ ಲಕ್ಷಣಗಳು ಗೋಚರವಾಗುತ್ತಿವೆ.

ದಾಖಲೆ ಬರೆದಿದ್ದ ವಿಜಯಪುರ

ಕಳೆದ ವರ್ಷ ಈರುಳ್ಳಿ ದರ ಗಗನಕ್ಕೇರಿತ್ತು. ವಿಜಯಪುರ ಎಪಿಎಂಸಿಯಲ್ಲಿ ಕ್ವಿಂಟಾಲ್ ಈರುಳ್ಳಿಗೆ 20 ಸಾವಿರ ರೂ. ದರ ದಾಟಿತ್ತು. ಕೆಜಿಗೆ 200 ರೂ. ವರೆಗೆ ಮಾರಾಟವಾಗಿತ್ತು. ವಿಜಯಪುರ ಸಾರ್ವಕಾಲಿಕ ದಾಖಲೆ ಬರೆದಿತ್ತು. ಕಳೆದ ವಾರವಷ್ಟೇ ಕೆಜಿ ಈರುಳ್ಳಿ 15 ರೂ. ನಿಂದ 20 ರೂ. ದರ ಇತ್ತು. ಪ್ರಸ್ತುತ ಮಾರುಕಟ್ಟೆ ಯಲ್ಲಿ ಕೆಜಿ ಈರುಳ್ಳಿ ಬೆಲೆ 25-30 ರೂ. ದರ ಇದೆ. ಮುಂದಿನ ದಿನಗಳಲ್ಲಿ 50- 60 ರೂ. ವರೆಗೆ ದರ ಹೆಚ್ಚಳ ಗೊಳ್ಳಲಿದೆ ಎನ್ನುತ್ತಾರೆ ರೈತ ಶಂಕರ ಗೌಡ ಪಾಟೀಲ.

ಸತತ ಮಳೆ, ಮೋಡ ಕವಿದ ವಾತಾವರಣ ದಿಂದ ಶಿಲೀಂಧ್ರ ರೋಗ ಹೆಚ್ಚಾಗಿದೆ. ಈರುಳ್ಳಿ ಬೆಳೆಗಾರರು ಕೃಷಿತಜ್ಞರ ಮಾರ್ಗದರ್ಶನದಂತೆ ಔಷಧ ಸಿಂಪಡಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು. | ಕೆ.ಧನರಾಜ್ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಈರುಳ್ಳಿ ಬೆಳೆಗೆ ಹಳದಿ ರೋಗ, ಕೊಳೆ ರೋಗ ಬಿದ್ದಿದ್ದು, ವಿಜಯಪುರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಲಾಗುತ್ತಿದೆ. ರೋಗದಿಂದಾಗಿ ಇಳುವರಿ ಕುಂಠಿತಗೊಳ್ಳಲಿದ್ದು, ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. | ಡಾ. ಆರ್.ಬಿ.ಬೆಳ್ಳಿ ಕೃಷಿ ವಿಜ್ಞಾನಿ   https://www.vijayavani.net/8-hard-drives-were-destroyed-before-rhea-left-actors-house/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net