

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಚಲನಚಿತ್ರಗಳಿಂದ ಸಮಾಜದಲ್ಲಿ ಉತ್ತಮ ಪರಿವರ್ತನೆ ತರುವ ಕೆಲಸ ಆಗಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಯುನಿವರ್ಸಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್, ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3170 ಸಹಯೋಗದೊಂದಿಗೆ ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ಸಂದೇಶ ಸಾರುವ ಚಲನಚಿತ್ರಗಳು ದೇಶ, ಸಮಾಜದಲ್ಲಿ ಪರಿವರ್ತನೆ ತರಬಲ್ಲದು. ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಸತತ 3ನೇ ಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುವ ಮೂಲಕ ಈ ಭಾಗ ಪ್ರತಿಭೆಗಳಿಗೆ ಅವಕಾಶ ಒದಗಿಸುವ ಕೆಲಸ ಮಾಡಿದ್ದಾರೆ. 2 ದಿನಗಳ ಚಲನಚಿತ್ರೋತ್ಸವ ಯಶಸ್ವಿಯಾಗಿ ನಡೆಯಲಿ ಎಂದರು.
ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಚಲನಚಿತ್ರೋತ್ಸವ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸ್ಪರ್ಧೆ ಹೆಚ್ಚಿ ಗುಣಮಟ್ಟದ ಚಲನಚಿತ್ರಗಳು ಮೂಡಿ ಬರಲಿವೆ ಎಂದು ಹೇಳಿದರು.
ನಟ, ನಿರ್ವಪಕ ಡಾ. ಕಲ್ಮೇಶ ಹಾವೇರಿಪೇಟ ಮಾತನಾಡಿ, ಸಾರ್ವಜನಿಕರು ಮೊಬೈಲ್ ಫೋನ್ನಲ್ಲಿ ಸಿನಿಮಾ ವೀಕ್ಷಿಸುವುದನ್ನು ಕಡಿಮೆ ಮಾಡಬೇಕು. ಟಾಕೀಸ್ಗೆ ಬಂದು ಚಿತ್ರ ವೀಕ್ಷಿಸಬೇಕು. ಇಂಥ ಚಲನಚಿತ್ರೋತ್ಸವದ ಮೂಲಕ ಈ ಭಾಗದ ಕಲಾವಿದರು ಬೆಳೆಯಲು ವೇದಿಕೆ ಸಿಕ್ಕಂತಾಗುತ್ತದೆ ಎಂದರು.
ಅಕಾಡೆಮಿ ಅಧ್ಯಕ್ಷ ಡಾ. ಎಂ.ಎ. ಮುಮ್ಮಿಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಅಧ್ಯಕ್ಷ ಅನೀಸ್ ಖೋಜೆ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ರೀಟಾ ಹಂಡಾ, ಪತ್ರಕರ್ತ ಗುರುರಾಜ ಹೂಗಾರ, ಡಾ. ಪ್ರಮೋದ ಹಿರೇಮಠ, ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಅಯ್ಯಪ್ಪ ಕುಮಾರ, ಇತರರು ಇದ್ದರು.