

ಗಂಗಾವತಿ: ವಿಜಯನಗರ ಅರಸರ ಕಾಲಘಟ್ಟದಲ್ಲಿದ್ದ ಯತಿಗಳ ಮತ್ತು ದಾಸರ ಪರಂಪರೆ ದಾಖಲೀಕರಣಕ್ಕಾಗಿ ಸೃಷ್ಟಿಸಿರುವ ಸಂಕೀರ್ತನೆ ಚಿತ್ರದ ಚಿತ್ರೀಕರಣಕ್ಕೆ ತಾಲೂಕಿನ ಆನೆಗೊಂದಿಯ ಚಿಂತಾಮಣಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಹಿರಿಯ ಚಿತ್ರನಟಿ ಮತ್ತು ನಿರ್ಮಾಪಕಿ ಕೆ.ಪದ್ಮಕಲಾ ಗುಂಡೂರಾವ್ ನಿರ್ಮಿಸುತ್ತಿರುವ ಸಂಕೀರ್ತನೆ ಚಿತ್ರದಲ್ಲಿ ದಾಸ ಸಾಹಿತ್ಯ ಮತ್ತು ಯತಿಗಳ ಕಾಲಘಟ್ಟವನ್ನು ದೃಶ್ಯಕಾವ್ಯದ ಮೂಲಕ ತಿಳಿಸಲಾಗುತ್ತಿದೆ. ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ದಾಸ ಪರಂಪರೆಯ ಕುರುಹಗಳಿರುವುದರಿಂದ ಆನೆಗೊಂದಿ ಸ್ಥಳವನ್ನೇ ಆಯ್ಕೆ ಮಾಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ರಾಜವಂಶಸ್ಥೆ ಲಲಿತಾರಾಣಿರಾಯಲು ಮಾತನಾಡಿ, ಆನೆಗೊಂದಿ ಭಾಗದಲ್ಲಿ ದಾಸಪರಂಪರೆಯ ದಾಖಲೆಗಳಿದ್ದು, ಭಾವೈಕ್ಯ ಕೇಂದ್ರವಾಗಿತ್ತು ಎಂದರು.
ಕಲಾವಿದರಾದ ಶರದ್ ದಂಡಿನ್, ಕಾರ್ಯಕಾರಿ ನಿರ್ಮಾಪಕ ವಿಜಯ್ ಭಾಸ್ಕರ್, ನಟರಾದ ವಿಷ್ಣುತೀರ್ಥ ಜೋಶಿ, ನಾಗರಾಜ್ ಇಂಗಳಗಿ, ತಾಂತ್ರಿಕ ತಂಡದ ಸದಸ್ಯರಾದ ಸಿದ್ದರಾಜು, ಗುಂಡಿ ರಮೇಶ್, ಗುಂಡಿ ಭಾರತಿ, ಕರಿಬಸಪ್ಪ, ಯಂಕಪ್ಪ, ಮಲ್ಕೇಶ್ ಕೋಟಿ ಇತರರಿದ್ದರು.