

ಹುಬ್ಬಳ್ಳಿ: ಉತ್ತರ ಕರ್ನಾಟಕದವರಿಗಾಗಿ ಅಭಿನಯ, ನಿರ್ದೇಶನ, ಸಂಕಲನ ಹಾಗೂ ಹೋಸ್ಟಿಂಗ್ ಮುಂತಾದ ವಿಷಯಗಳ ಕುರಿತು 2 ತಿಂಗಳು ಉಚಿತ ತರಬೇತಿ ನೀಡಲಾಗುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಸುಶಾ ಫಿಲ್ಮ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕ ಓಂ ಕಿರಣ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಅನುಭವಿ ಕಲಾವಿದರು, ಸಾಹಿತಿಗಳು, ನಿರ್ಮಾಪಕರು ಹಾಗೂ ವಿತರಕರು ಸೇರಿ ಈ ಕಾರ್ಯಾಗಾರ ಏರ್ಪಡಿಸಿದ್ದಾರೆ. ಅಭಿನಯ ಕಲಿಸಿ ಶಾರ್ಟ್ ಫಿಲ್ಮ ಕೂಡ ಅವರಿಂದ ತಯಾರಿಸಲಾಗುವುದು ಎಂದರು.
ಉತ್ತರ ಕರ್ನಾಟಕದ ಹೊಸ ಕಲಾವಿದರನ್ನು ಬಳಸಿಕೊಳ್ಳಲಾಗುವುದು. ತರಬೇತಿಯಲ್ಲಿ ಸಿನಿಮಾ ಕುರಿತು ಬೇಸಿಕ್ ಕಲಿಸಿಕೊಡಲಾಗುವುದು. ಈ ಭಾಗದ ಜನಪದ ಕಲೆ ಉಳಿಸುವ ಮಹತ್ವದ ಉದ್ದೇಶವೂ ಇದರಲ್ಲಿದೆ ಎಂದರು.
ರಂಗತಜ್ಞೆ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ವಿದ್ಯಾನಗರ ಶಿರೂರ ಪಾರ್ಕ್ ಎರಡನೇ ಹಂತದಲ್ಲಿರುವ ಫಿಲ್ಮ ಫ್ಯಾಕ್ಟರಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ತರಬೇತಿ ನೀಡಲಾಗುತ್ತದೆ. ರಜಾ ದಿನಗಳಲ್ಲಿ ಮಕ್ಕಳಿಗೆ ಅನುಕೂಲವಾಗುತ್ತದೆ. ಈಗಾಗಲೇ 20ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಮಾತನಾಡಿ, ಉಚಿತ ತರಬೇತಿಯಿಂದ ಆಸಕ್ತ ಕಲಾವಿದರಿಗೆ ಅನುಕೂಲವಾಗಲಿದೆ. ಹೊಸ ಕಲಾವಿದರು ಹೊರಬರಲು ನೆರವಾಗಲಿದೆ ಎಂದರು.
ನಿರ್ದೇಶಕ ಕುಮಾರ ಬೇಂದ್ರೆ, ಬೆಂಗಳೂರಿನ ತರಬೇತಿದಾರ ಡಾ. ಸುರೇಶ ವಿ., ಕಲಾ ನಿರ್ದೇಶಕ ಕಾತಿರ್ಕ ಶಿಂಧೆ ಇತರರು ಇದ್ದರು.