

ನುಗ್ಗೇಹಳ್ಳಿ: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳನ್ನು ಬಿಡುಗಡೆಮಾಡಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಹನುಮಂತಪುರ ಗ್ರಾಮದ ವೀರಾಂಜನೇಯ ಸ್ವಾಮಿ ಸನ್ನಿಧಿ 2ನೇ ವಾರ್ಷಿಕೋತ್ಸವದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ನೋಡಿ ಆನಂದಿಸುವಂತಾಗಲಿ. ಚಿತ್ರದ ಹಾಡುಗಳು ಸಕಲೇಶಪುರ ಹಾಗೂ ರಾಮನಗರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣಗೊಂಡಿದ್ದು, ಮುದ ನೀಡಲಿ ಎಂದರು. ಕನ್ನಡ ಸಿನಿಮಾ ರಂಗಕ್ಕೆ ಡಾ. ರಾಜಕುಮಾರ್ ನೀಡಿದ ಚಲನ ಚಿತ್ರಗಳು ಮಹತ್ವ ತಂದುಕೊಟ್ಟಿವೆ. ಆ ರೀತಿಯ ಆದರ್ಶಗಳನ್ನು ಸಾರುವ ಚಲನಚಿತ್ರಗಳು ಮೂಡಿ ಬರಲಿ ಎಂದವರು ಆಶಿಸಿದರು.
ಉದ್ಯಮಿ ಹಾಗೂ ನಿರ್ಮಾಪಕರಾದ ಸಂತೋಷ್ ಕುಮಾರ್, ವಿದ್ಯಾಶ್ರೀ, ನಾಯಕ ನಟ ( ಕಾಮಿಡಿ ಕಿಲಾಡಿಗಳು -ಧಾರಾವಾಹಿ ಮೂಲಕ ಜನರ ಮನ ಗೆದ್ದಿರುವ ಕಲಾವಿದ) ಮಡೆನೂರು ಮನು, ನಾಯಕಿ (ರಾಮಾಚಾರಿ ಧಾರಾವಾಹಿ ಖ್ಯಾತಿಯ) ಮೌನಾ ಗುಡ್ಡೆಮನೆ, ನಿರ್ದೇಶಕ ರಾಮನಾರಾಯಣ,ಶಿಕ್ಷಕ ಶಿವಣ್ಣ, ಚಿತ್ರ ತಂಡದ ಜಗದೀಶ್, ಯೋಗಣ್ಣ, ಶ್ರೀನಿವಾಸ, ಚೇತನ್ ಇತರರು ಹಾಜರಿದ್ದರು.