ನಾಮದಚಿಲುಮೆಯಲ್ಲಿ ಚಿತ್ರೀಕರಣ, ಸಿನಿ ತಂಡದ ವಿರುದ್ಧ ಎಫ್ ಐಆರ್​ !

Caravan
Published on

ತುಮಕೂರು: ದೇವರಾಯನದುರ್ಗ ಮೀಸಲು ಸಂರಕ್ಷಿತ ಅರಣ್ಯ ಪ್ರದೇಶ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೆ ಚಿತ್ರೀಕರಣ ನಡೆಸಿದ ನಟಿ ರತಾಪ್ರೇಮ್​ ಸಹೋದರ ರಾಣಾ ಅಭಿನಯಿಸುತ್ತಿರುವ ಸಿನಿಮಾ ತಂಡ ವಿರುದ್ಧ ಅರಣ್ಯ ಇಲಾಖೆಯು ಎಫ್ ಐಆರ್​ ದಾಖಲಿಸಿದೆ.

ಅರಣ್ಯ ಇಲಾಖೆ ಅನುಮತಿ ಇಲ್ಲದೇ ನಾಮದ ಚಿಲುಮೆ ಅರಣ್ಯಪ್ರದೇಶದಲ್ಲಿ ಮಂಗಳವಾರ ರಾತ್ರಿ ಚಿತ್ರೀಕರಣ ನಡೆಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆ ಎಸಿಎಫ್​ ಪವಿತ್ರಾ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಚಿತ್ರೀಕರಣಕ್ಕೆ ತಡೆಯೊಡ್ಡಿತಲ್ಲದೆ, ಜನರೇಟರ್​ ಸೇರಿದಂತೆ ಚಿತ್ರೀಕರಣಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ನಟಿ ರಕ್ಷಿತಾಪ್ರೇಮ್​ ಸಹೋದರ ರಾಣಾ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್​ ಕಳೆದ 3-4 ದಿನಗಳಿಂದ ದೇವರಾಯನದುರ್ಗದ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ರಾತ್ರಿ ನಾಮದಚಿಲುಮೆ ಮುಖ್ಯಗೇಟ್​ ಬಳಿ ಬೃಹತ್ ​ಫೋಕಸ್ ಲೈಟ್​ಗಳನ್ನು ಬಳಸಿ ಚಿತ್ರೀಕರಣ ಮಾಡಲಾಗುತ್ತಿದ್ದ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳ ತಂಡ ಚಿತ್ರೀಕರಣ ನಿಲ್ಲಿಸಿ ವನ್ಯಜಿವಿ ಸಂರಕ್ಷಣಾ ಕಾಯ್ದೆ ಉಲ್ಲಂನೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದೆ.

ಸ್ಟಾರ್​ ನಿರ್ದೇಶಕ ತರುಣ್​ ಸುಧೀರ ಪ್ರೊಡಕ್ಷನ್ಸ್​ ಹೆಸರಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೋರಿ ಅರಣ್ಯ ಇಲಾಖೆ ಅರ್ಜಿ ಸಲ್ಲಿಸಿದ್ದು ಇಲಾಖೆ ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ. ಆದರೂ, ಚಿತ್ರತಂಡ ಚಿತ್ರೀಕರಣ ಶುರು ಮಾಡಿತ್ತು. 60 ರಿಂದ 70 ಮಂದಿ ಚಿತ್ರತಂಡದ ಸಿಬ್ಬಂದಿ ರಾತ್ರಿವೇಳೆ ಚಿತ್ರೀಕರಣದಲ್ಲಿ ತೊಡಗಿತ್ತು. ಎಸಿಎಫ್​ ಪವಿತ್ರಾ, ರಬ್ಬಾನಿ, ಹಾಲಪ್ಪ ನೇತೃತ್ವದ ತಂಡವು ಚಿತ್ರೀಕರಣಕ್ಕೆ ಬಳಸಿದ್ದ ಕ್ಯಾಮೆರಾ, ಲೈಟ್​, ಟಿಟಿ ವಾಹನ, ಜನರೇಟರ್​, ಅಡುಗೆ ಪಾತ್ರೆ, ಚೇರ್​, ಟೇಬಲ್​ಗಳನ್ನು ವಶಕ್ಕೆ ಪಡೆದುಕೊಂಡಿದೆ. ನಟ ರಾಣಾ, ನಟಿ ಪ್ರಿಯಾಂಕ ಆಗಲಿ ಯಾರೊಬ್ಬರು ಈ ಸಂದರ್ಭದಲ್ಲಿ ಇರಲಿಲ್ಲ ಎನ್ನಲಾಗಿದೆ.

ಕೋಟ್​..

ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ 1963ರ ಪ್ರಕಾರ ಸೆಕ್ಷನ್​ 24ರ ಅಡಿ ರಾತ್ರಿ ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಿರುವುದು, ರಾತ್ರಿ ವೇಳೆ ವನ್ಯಜಿವಿಗಳ ಓಡಾಟಕ್ಕೆ ಸಂಚಕಾರ ತಂದೊಡ್ಡುವ ಬೃಹತ್​ ಫೋಕಸ್​ ಲೈಟುಗಳನ್ನು ಬಳಸಿರುವುದು, 60-70 ಮಂದಿ ಒಂದೆಡೆ ಸೇರಿ ವನ್ಯಜಿವಿಗಳಲ್ಲಿ ಭಯ ಹುಟ್ಟಿಸಿ ಕಾನೂನು ಉಲ್ಲಂಘಿಸಿರುವ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಗಂಭೀರ ಪ್ರಕರಣವಾಗಿದ್ದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತನಿಖೆ ನಡೆಸಲಿದ್ದಾರೆ.

ಡಿಸಿಎಫ್  ಭಿನ್ನ ಹೇಳಿಕೆ ನಾಮದ ಚಿಲುಮೆ ಮುಖ್ಯಗೇಟ್​ ಬಳಿ ಚಿತ್ರೀಕರಣ ನಡೆಯುತ್ತಿರಲಿಲ್ಲ. ಚಿತ್ರ ತಂಡ ಊಟಕ್ಕೆ ನಿಲ್ಲಿಸಿದ್ದು ಕತ್ತಲೆ ಕಾರಣಫೋಕಸ್​ ಲೈಟ್​ ಬಳಸಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಎಚ್​.ಅನುಪಮಾ ಭಿನ್ನ ಹೇಳಿಕೆ ನೀಡಿದ್ದಾರೆ. ಆದರೆ, ಚಿತ್ರೀಕರಣ ನಡೆಯುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲೇ ಎಸಿಎ್​ ಪವಿತ್ರಾ ನೇತೃತ್ವದ ಸ್ಥಳಕ್ಕೆ ದೌಡಾಯಿಸಿದ್ದು ಅವರ ಬಳಿ ಚಿತ್ರೀಕರಣ ಮಾಡಿರುವ ವಿಡಿಯೋ ದೃಶ್ಯಗಳಿವೆ.

ನಾಮದ ಚಿಲುಮೆ ಬಳಿ ಊಟಕ್ಕೆ ನಿಲ್ಲಿಸಿದ್ದ ಚಿತ್ರ ತಂಡ ಫೋಕಸ್​ ಲೈಟ್​ ಬಳಸಿದ್ದರಿಂದ ಎಫ್ ಐಆರ್​ ದಾಖಲಿಸಲಾಗಿದೆ. ತರುಣ್​ ಸುಧೀರ್​ ಪ್ರೊಡಕ್ಷನ್​ ಚಿತ್ರೀಕರಣ ತಂಡ ಅರ್ಜಿ ಸಲ್ಲಿಸಿ ಚಿತ್ರೀಕರಣಕ್ಕೆ ಶುಲ್ಕ ಸಹ ಪಾವತಿಸಿತ್ತು. ಆದರೆ, ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿರಲಿಲ್ಲ. ಎಚ್​.ಅನುಪಮಾ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net