ಸಿನಿಮಾ ನಿರ್ಮಾಪಕ‌‌ ಉಮಾಪತಿ ಎಚ್ಚರಿಕೆ: ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ, ಊರೇ ಖಾಲಿ ಮಾಡಬೇಕಾಗುತ್ತದೆ

IMG_20250502_145026.jpg
Published on

ಚಿಕ್ಕಬಳ್ಳಾಪುರ: ಒಕ್ಕಲಿಗ ಸಮುದಾಯಕ್ಕೆ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ರಾಜ್ಯದಲ್ಲಿರುವವರನ್ನೆಲ್ಲ ಸೇರಿಸಲಾಗುತ್ತದೆ. ಆಗ ಊರು ನೀವು (ಗುಡಿಬಂಡೆಯಲ್ಲಿ ಕೆಂಪೇಗೌಡರನ್ನು ಟೀಕಿಸಿದವರು) ಊರನ್ನೇ ಬಿಡಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ,  ಸಿನಿಮಾ ನಿರ್ಮಾಪ‌ಕ ಉಮಾಪತಿ ಎಚ್ಚರಿಕೆ ನೀಡಿದ್ದಾರೆ.
ನಮ್ಮದು ಅಲ್ಪಸಂಖ್ಯಾತ ವರ್ಗವಲ್ಲ, ನಾವು ಬಹುಸಂಖ್ಯಾತರು, ನಮ್ಮ ಕೊಡುವ ಕೈ, ತೆಗೆದುಕೊಳ್ಳುವರಲ್ಲ, ಮೊದಲಿನಿಂದಲೂ ಒಕ್ಕಲಿಗ ಸಮುದಾಯವು ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದೆ. ಗುಡಿಬಂಡೆಯನ್ನು ಕಡಿ ಬಡೆಯನ್ನಾಗಿಸಲು ಹೋಗಬೇಡಿ ಎಂದು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ಮಹಾನಗರ ನಿರ್ಮಾಣದ ವೇಳೆ ವಿವಿಧ ಜನಾಂಗಗಳ, ವೃತ್ತಿ ಕಸಬಿನ ಪೇಟೆಯನ್ನು ನಿರ್ಮಿಸಿದರು. ಒಕ್ಕಲಿಗರ ಪೇಟೆ ನಿರ್ಮಿಸಿಲ್ಲ. ಎಲ್ಲ ಜನಾಂಗಗಳ ಹಿತವನ್ನು ಬಯಸಿದ್ದರು ಎಂದರು.
ಚಿಕ್ಕಬಳ್ಳಾಪುರ, ಗುಡಿಬಂಡೆ ಭಾಗದಲ್ಲಿ ಶಾಂತಿಯುತ ವಾತಾವರಣ ಇದೆ.‌ ಇದನ್ನು ಯಾರೂ ಹದಗೆಡಿಸಬಾರದು.  ಒಕ್ಕಲಿಗ ಸಮುದಾಯವನ್ನು ಕಡೆಗಣಿಸುವುದನ್ನು ಸಹಿಸುವುದಿಲ್ಲ. ಕೆಂಪೇಗೌಡರನ್ನು ಟೀಕಿಸಿದವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಾವು ಯಾರನ್ನೂ ಪುತ್ಥಳಿ ಸ್ಥಾಪನೆಗಾಗಿ ಹಣವನ್ನು ಕೇಳಿಕೊಳ್ಳುವುದಿಲ್ಲ. ನಮ್ಮ ದುಡ್ಡಿನಲ್ಲಿಯೇ ಜಾಗವನ್ನು ಖರೀದಿಸುತ್ತೇವೆ. ನಮ್ಮದ್ದು ತೆಗೆದುಕೊಳ್ಳುವ ಕೈ ಅಲ್ಲ, ಕೊಡುವ ದಾನದ ಕೈ ಎಂದು ತಿಳಿಸಿದರು.
ಗುಡಿಬಂಡೆಯಲ್ಲಿನ ಪುತ್ಥಳಿ ಸ್ಥಾಪನೆ ವಿಚಾರವು‌ ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗಬೇಕಾಗಿತ್ತು. ಆದರೆ, ಇದು ಬೀದಿಗೆ ಬಂದಿದೆ.‌ ಇದಕ್ಕೆ ಅವಕಾಶ ನೀಡಬಾರದಾಗಿತ್ತು ಎಂತಲೂ ಸಲಹೆ ನೀಡಿದ್ದಾರೆ.
ಗುಡಿಬಂಡೆಯಲ್ಲಿ ಉದ್ಯಾನಕ್ಕೆ ಗುರುತಿಸಲಾದ ಜಾಗದಲ್ಲಿ ಬಲಿಜ ಸಂಘವು ಕೈವಾರ ತಾತಯ್ಯ ಪ್ರತಿಮೆ ಹಾಗೂ ಒಕ್ಕಲಿಗ ಸಂಘವು ಹಾವಳಿ ಬೈರೇಗೌಡರ ಪುತ್ಥಳಿ ಸ್ಥಾಪನೆಗೆ ಮುಂದಾಗಿದ್ದು ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಜಟಾಪಟಿ ನಡೆಯುತ್ತಿದೆ.‌ ಇದರ ಗಲಾಟೆಯಲ್ಲಿ ಕಿಡಿಗೇಡಿಯೊಬ್ಬ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಚಪ್ಪಲಿ ಹಾರ ಹಾಕುವುದಾಗಿ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net