

ಹುಬ್ಬಳ್ಳಿ: ಪಾಂಡೋರಸ್ ಬಾಕ್ಸ್ ಪ್ರೊಡಕ್ಷನ್ಸ್ ಮತ್ತು ಕೃಷ್ಣ ಛಾಯಾಚಿತ್ರ ಬ್ಯಾನರ್ ಅಡಿಯಲ್ಲಿ ಸಿದ್ಧಗೊಂಡಿರುವ "ಎಲ್ಲೋ ಜೋಗಪ್ಪ ನಿನ್ನರಮನೆ' ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಫೆ. 21ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹಯವದನ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪ ಹಾಗೂ ಮಗನ ಕುರಿತು ಒಳ್ಳೆಯ ಕಥೆ ಇರುವ ಸಿನಿಮಾ ಮಾಡಿದ್ದೇವೆ. ದಣದಿಂದ ಉತ್ತರದ ಕಡೆ ಸಾಗುವ ಪಯಣ, ಮಧ್ಯೆ ಬರುವ ಊರು, ವ್ಯಕ್ತಿಗಳ ಮಹತ್ವ, ಭಾವನೆಗಳಿಂದ ತುಂಬಿದ ಪಕ್ಕಾ ಫ್ಯಾಮಿಲಿ ಸಿನಿಮಾ ಆಗಿದ್ದು, ಎಲ್ಲಿಯೂ ಬೋರ್ ಆಗುವುದಿಲ್ಲ ಎಂಬ ಭರವಸೆ ಇದೆ ಎಂದರು.
ಬೆಂಗಳೂರಿನಿಂದ ಉತ್ತರಾಖಂಡ್ ಹಾಗೂ ಹಿಮಾಲಯ ಪರ್ವತದ ವರೆಗೆ ನಡೆಯುವ ಜರ್ನಿಯೇ ಚಿತ್ರದ ಕಥೆ. ಮಧ್ಯದಲ್ಲಿ ಹಲವು ರಾಜ್ಯಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ನಾಲ್ಕು ಹಾಡುಗಳಿದ್ದು, ದೇಶಿಯ ಸೊಗಡು ಚಿತ್ರದಲ್ಲಿದೆ. ಮನರಂಜನೆಗೆ ಬೇಕಾದ ಎಲ್ಲ ಅಂಶಗಳನ್ನು ಅಡಕ ಮಾಡಲಾಗಿದೆ ಎಂದರು.
ನಿರ್ಮಾಪಕ ಪವನ್ ಸೀಮಿಕೇರಿ ಮಾತನಾಡಿ, ಬಾಗಲಕೋಟೆ ಮೂಲದ ತಾವು ಜನರಿಗೆ ಉತ್ತಮ ಸಿನಿಮಾ ನೀಡಬೇಕು ಎಂಬ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದರು.
ಛಾಯಾಗ್ರಹಣ ನಟರಾಜ ಮದ್ದಾಲ, ಸಂಕಲನ ಸಿ. ರವಿಚಂದ್ರನ್, ಸಂಗೀತ ಶಿಮೋಮ್, ಸಾಹಿತ್ಯ ಪ್ರಮೋದ ಮರವಂತೆ ಹಾಗೂ ರವೀಂದ್ರ ಮುದ್ದಿ, ಕಲಾ ನಿರ್ದೇಶನ ಹೊಸ ಮನೆ ಮೂರ್ತಿ ಇವರೆಲ್ಲರ ಪರಿಶ್ರಮದಲ್ಲಿ ಅತ್ಯುತ್ತಮ ಚಿತ್ರ ಮೂಡಿಬಂದಿದೆ ಎಂದರು.
ಅಂಜನ್ ನಾಗೇಂದ್ರ, ವೆನ್ಯಾ ರೈ, ಸಂಜನಾ ದಾಸ್, ಶರತ್ ಲೋಹಿತಾಶ್ವ, ದಿನೇಶ ಮಂಗಳೂರು, ಬಿರಾದಾರ್, ದಾನಪ್ಪ ಉಮೇಶ, ವಿಠ್ಠಲ ಪರೀಟ್, ಸ್ವಾತಿ, ಇಳಾ ವಿಟ್ಲಾ ತಾರಾಗಣದಲ್ಲಿದ್ದಾರೆ.
ಬೆಂಗಳೂರು, ಮೈಸೂರ, ಉತ್ತರ ಕರ್ನಾಟಕದ ಹುಬ್ಬಳ್ಳಿ ಚನ್ನಮ್ಮ ವೃತ್ತ, ಸಿದ್ಧಾರೂಢ ಮಠ, ಬಾಗಲಕೋಟೆ, ವಿಜಯಪುರ, ಮಹಾರಾಷ್ಟ್ರ, ಪಂಡರಾಪುರ, ದೆಹಲಿ, ಮನಾಲಿ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.