

ನವೆಂಬರ್ ತಿಂಗಳಲ್ಲಿ ಚಿತ್ರಪ್ರೇಮಿಗಳಿಗೆ ವಿಶಿಷ್ಟ ಹಬ್ಬ. ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕರ್ನಾಟಕ ಅಂತಾರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲಾಗುತ್ತಿದೆ. ಮೂರು ದಿನಗಳ ಈ ಸಂಭ್ರಮದಲ್ಲಿ ಕಲಾವಿದರ ಸಮಾಗಮ ಆಗಲಿದೆ. ಧಾರವಾಡದ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಸತ್ತೂರಿನ ಟ್ರಾವಲ್ ಇನ್ ಹೋಟೆಲ್ನಲ್ಲಿ ನ. 19, 20 ಮತ್ತು 21ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನ ಉದ್ಘಾಟನೆ, ಎರಡನೇ ದಿನ ಅವಿವಾಹಿತ ಮಹಿಳೆಯರಿಗಾಗಿ (18ರಿಂದ 35 ವಯಸ್ಸಿನೊಳಗೆ) ‘ಮಿಸ್ ಕಿಫ್ ಕ್ವೀನ್ -2021’ ಸ್ಪರ್ಧೆ, ಕೊನೆಯ ದಿನ ಸಮಾರೋಪ ಸಮಾರಂಭದ ಜತೆಗೆ ಸಿನಿಮಾ ಪ್ರದರ್ಶನ, ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಫೋಕಸ್ ಕಂಟ್ರಿ ಮಾಲ್ಡೀವ್ಸ್ನಿಂದ 11 ಸೆಲೆಬ್ರಿಟಿಗಳು ಆಗಮಿಸಲು ಉತ್ಸಾಹ ತೋರಿದ್ದಾರೆ. ಇಂಡೋ-ಲ್ಯಾಟಿನ್ ಅಮೆರಿಕದಿಂದಲೂ ಬಹಳಷ್ಟು ಕಲಾವಿದರು ಆಗಮಿಸುವ ನಿರಿಕ್ಷೆ ಇದೆ. ತೆಲಂಗಾಣ, ಉತ್ತರಾಖಂಡ, ಅರುಣಾಚಲಪ್ರದೇಶ, ಅಸ್ಸಾಂ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಜನಪ್ರಿಯ ನಟ-ನಟಿಯರು ಸಹ ಈ ಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಅಕಾಡೆಮಿ ನಡೆದು ಬಂದ ಹಾದಿ: ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೋತ್ಸವ ಅಭಿವೃದ್ಧಿಪಡಿಸುವ ಉದ್ದೇಶದಿಂದ ನವ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಧಾರವಾಡದಲ್ಲಿ 2017ರಲ್ಲಿ ಆರಂಭಿಸಲಾಯಿತು. ಇದರ ನೇತೃತ್ವ ವಹಿಸಿದವರು ಡಾ.ಎಂ.ಎ. ಮುಮ್ಮಿಗಟ್ಟಿ. ಈ ಅಕಾಡೆಮಿ ಆರಂಭಕ್ಕೆ ಮುನ್ನ ಇವರು, ಬೇರೆಬೇರೆ ದೇಶಗಳಲ್ಲಿನ 10ರಿಂದ 15 ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮಾಹಿತಿ, ಜ್ಞಾನ ಪಡೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಚಿತ್ರೋತ್ಸವ ಆಯೋಜಿಸಲು ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಹಾಗೂ ಮಾಲ್ಡೀವ್ಸ್ ಚಲನಚಿತ್ರ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿವೆ.
ನೋಂದಣಿ ಪ್ರಕ್ರಿಯೆ ಹೇಗೆ?: ಮೂರು ದಿನಗಳವರೆಗೆ ನಡೆಯುವ ಈ ಉತ್ಸವದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳು ಹುಬ್ಬಳ್ಳಿ-ಧಾರವಾಡದ 6 ಸ್ಕ್ರೀನ್ಗಳಲ್ಲಿ ಪ್ರದರ್ಶನಗೊಳ್ಳಲಿವೆ. ಎಲ್ಲ ಭಾಷೆಯ ಚಲನಚಿತ್ರ ಹಾಗೂ ಕಿರುಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇದಕ್ಕೂ ಮೊದಲು ಅವರು ಚಲನಚಿತ್ರಗಳ ನೋಂದಣಿ ಮಾಡಿಸಬೇಕು. ಆಯ್ಕೆಯಾದ ಚಲನಚಿತ್ರ ಹಾಗೂ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಮೊ.ಸಂ. 9113653959, 9538511059ಗೆ ಸಂರ್ಪಸಬಹುದು.
ನಮ್ಮ ಕರ್ನಾಟಕದ ಜನರಿಗೆ ಉತ್ತರ ಕರ್ನಾಟಕ ದಿಂದಲೇ ಏನಾದರೊಂದು ಕೊಡುಗೆ ನೀಡುವ ಉದ್ದೇಶವಿತ್ತು. ಹಾಗಾಗಿಯೇ ನವ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಮೊದಲ ಬಾರಿ ಕರ್ನಾಟಕ ಅಂತಾರಾಷ್ಟ್ರೀಯ ಚಿತ್ರೋತ್ಸವ ಏರ್ಪಾಡಾಗಿದೆ.
| ಡಾ.ಎಂ.ಎ. ಮುಮ್ಮಿಗಟ್ಟಿ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಧಾರವಾಡ ಅಧ್ಯಕ್ಷ