ಅವನು ಬಂದರೆ ಹಿಡಿದು ನನಗೊಪ್ಪಿಸಿ: ಅಪ್ಪ-ಮಗನ ವಿರುದ್ಧ ನಿರ್ದೇಶಕರಿಂದ ಎರಡೆರಡು ಕಡೆ ದೂರು

Feat
ಚಿತ್ರ ನಿರ್ದೇಶಕ ಪ್ರಶಾಂತ್ ರಾಜ್​
Published on

ಬೆಂಗಳೂರು: ಅಪ್ಪ-ಮಗ ಇಬ್ಬರು ಸೇರಿಕೊಂಡು ನನಗೆ ಮೋಸ ಮಾಡಿದ್ದಾರೆ ಎಂದು ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ರಾಜ್ಯದ ಎರಡು ಕಡೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾತ್ರವಲ್ಲ, ಆ ವ್ಯಕ್ತಿ ನಿಮ್ಮಲ್ಲಿಗೆ ಬಂದರೆ ಹಿಡಿದು ನನಗೊಪ್ಪಿಸಿ, ಪೊಲೀಸರೂ ಆತನನ್ನು ಹುಡುಕುತ್ತಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಚನ್ನಪಟ್ಟಣದ ಶಬರೀಶ್​ ಮತ್ತು ವಿಜಯಕುಮಾರ್ ಅವರ ವಿರುದ್ಧ ಚನ್ನಪಟ್ಟಣ ಟೌನ್​ ಹಾಗೂ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಗಿ ಚಿತ್ರ ನಿರ್ದೇಶಕ ಪ್ರಶಾಂತ್ ರಾಜ್ ಹೇಳಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಶಬರೀಶ್​ ಹಾಗೂ ವಿಜಯಕುಮಾರ್​ ಅವರಿಗೆ ನನ್ನ ತೋಟದಲ್ಲಿ ಒಂದು ಮನೆ ಕಟ್ಟುವ ಕೆಲಸ ವಹಿಸಿದ್ದೆ. ಅವರಿಬ್ಬರೂ ಅಪ್ಪ-ಮಗ, ಅವರಿಗೆ 30-40 ಲಕ್ಷ ರೂ. ನಗದು ನೀಡಿದ್ದಲ್ಲದೆ, ಓಡಾಟಕ್ಕೆಂದು ಕಾರು ಕೂಡ ಕೊಟ್ಟಿದ್ದೆ. ಆದರೆ ಆ ವ್ಯಕ್ತಿ ಕಳಪೆ ಕಾಮಗಾರಿ ಮಾಡಿದ್ದು, ಹಣ-ಕಾರು ವಾಪಸ್​ ಕೊಡು ಎಂದರೆ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ವಿಡಿಯೋ ಮಾಡಿ ಹೇಳಿಕೊಂಡು ಹಂಚಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲದೆ ನಾನು ಕೆಲವು ದಿನಗಳ ಹಿಂದೆ ಕೋವಿಡ್​ಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದೆ. ಈ ಸಮಯದಲ್ಲಿ ನನ್ನ ವಿರುದ್ಧವೇ ಇಲ್ಲ ಸಲ್ಲದ್ದು ಆರೋಪ ಮಾಡಿಕೊಂಡು ಓಡಾಡುತ್ತಿದ್ದಾನೆ. ಮಾತ್ರವಲ್ಲ, ಈಗ ನಾನು ಹಣ-ಕಾರು ಕೇಳಿದ್ದಕ್ಕೆ ಮೀಡಿಯಾ ಮುಂದೆ ಹೋಗುತ್ತೇನೆ ಎಂದು ನನ್ನ ವಿರುದ್ಧವೇ ಬೇಡದ್ದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಒಂದು ವೇಳೆ ಆತ ಎಲ್ಲಾದರೂ ನಿಮ್ಮ ಬಳಿಗೆ ಹಾಗೆ ಹೇಳಿಕೊಂಡು ಬಂದರೆ ನನ್ನನ್ನು ಕರೆಯಿರಿ ಅಥವಾ ಆತನನ್ನು ಹಿಡಿದು ನನಗೊಪ್ಪಿಸಿ, ಪೊಲೀಸರು ಕೂಡ ಆತನನ್ನು ಹುಡುಕುತ್ತಿದ್ದಾರೆ ಎಂದು ಪ್ರಶಾಂತ್ ರಾಜ್ ಹೇಳಿಕೊಂಡಿದ್ದಾರೆ. ಪ್ರಶಾಂತ್​ ರಾಜ್​ ಅವರು ಲವ್​ ಗುರು, ಆರೆಂಜ್​, ದಳಪತಿ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net