

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಕಳೆದ ಎಂಟು ವರ್ಷಗಳಿಂದ ಜಿಎಸ್‌ಟಿ ಹೆಸರಿನಲ್ಲಿ 127 ಲಕ್ಷ ಕೋಟಿ ರೂ. ಜನರಿಂದ ತೆರಿಗೆಯಾಗಿ ವಸೂಲಿ ಮಾಡಿದೆ. ಸಾಮಾನ್ಯ ಜನರಿಗೆ ಮೋಸ ಮಾಡಿ ಶ್ರೀಮಂತರ ಖಜಾನೆ ಭರ್ತಿ ಮಾಡಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಟೀಕಿಸಿದರು
ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ಶ್ರಮಿಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಸಿಐಟಿಯು 6ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ದೇಶಾದ್ಯಂತ ಬಿಜೆಪಿ ಜಿಎಸ್‌ಟಿ ವಿಜಯೋತ್ಸವ ಆಚರಿಸಿತು. ಆದರೆ ಜನರಿಂದ ತೆರಿಗೆ ರೂಪದಲ್ಲಿ 127 ಲಕ್ಷ ಕೋಟಿ ರೂ. ಸಂಗ್ರಹವಾಯಿತು. ಈಗ ವಾಸ್ತವವಾಗಿ ಹಿಂತಿರುಗಿಸುತ್ತಿರುವುದು ಕೇವಲ 2.5 ಲಕ್ಷ ಕೋಟಿ ರೂ. ಮಾತ್ರ. ಹೀಗಾಗಿ ಇದು ಲೂಟಿಯೋತ್ಸವವಾಗಿ ಆಚರಿಸಬೇಕಿತ್ತು ಎಂದು ವ್ಯಂಗ್ಯವಾಡಿದರು.
ಮತ್ತೊಬ್ಬ ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತಾ ಮಾತನಾಡಿ, ದೇಶಾದ್ಯಂತ 25 ಕೋಟಿ ಶ್ರಮಜೀವಿಗಳು ಅಖಿಲ ಭಾರತ ಮುಷ್ಕರ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಸದ ಅವಧಿ ಹೆಚ್ಚಳ, ರಾತ್ರಿ ಪಾಳಯದಲ್ಲಿ ಮಹಿಳೆಯರಿಗೆ ಕಡ್ಡಾಯ ಕೆಲಸದ ಅವಧಿಯ ಹೆಚ್ಚಳದಂತಹ ನೀತಿಗಳು ಹಿಮ್ಮೆಟ್ಟಿಸಲಾಗಿದೆ. ಕಾರ್ಮಿಕರಿಗೂ ಕೆಲ ವೇತನ ಸೌಲಭ್ಯ ಹೆಚ್ಚಳವಾಗಿವೆ ಎಂದರು.
ಜಿಲ್ಲಾಧ್ಯಕ್ಷ ಬಿ.ಐ. ಈಳಗೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಬಿ.ಎನ್. ಪೂಜಾರಿ, ರೈತ ಮುಖಂಡ ಬಿ.ಎಸ್. ಸೊಪ್ಪಿನ, ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಬಸವರಾಜ ಕೋರಿಮಠ, ಮಂಜುನಾಥ ಹುಜರಾತಿ, ನಾರಾಯಣ ಆರೇರ, ಸುನಂದಾ ಚಿಗರಿ, ಎ.ಎಂ. ಖಾನ್, ಜ್ಯೋತಿ ವಡ್ಡರ, ನೀಲಮ್ಮ ಕುರುಬರ, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಗುರುಸಿದ್ದಪ್ಪ ಅಂಬಿಗೇರ ಸ್ವಾಗತಿಸಿದರು. ಚನ್ನಮ್ಮ ಡೊಳ್ಳಿನ ವಂದಿಸಿದರು. ಇದಕ್ಕೂ ಮೊದಲು ನಡೆದ ಧ್ವಜಾರೋಹಣವನ್ನುಸಿಐಟಿಯು ಹಿರಿಯ ಮುಖಂಡ ಬಸವಣ್ಣೆಪ್ಪ ನೀರಲಗಿ ನೇರವೇರಿಸಿದರು.